ಸಾಲ ಬಾಧೆ ರೈತ ಆತ್ಮಹತ್ಯೆ
ಕ.ಪ್ರ. ವಾರ್ತೆ ಟಿ ಶಿರಾ ಟಿ ಮಾ. 4
ಸಾಲ ಬಾಧೆಯನ್ನು ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುಲಿಕುಂಟೆ ಹೋಬಳಿಯ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಅಗ್ರಹಾರ ಗ್ರಾಮದ ರಾಜಣ್ಣ (42) ಎನ್ನುವ ರೈತ ತನ್ನ ಜಮೀನಿನಲ್ಲಿ ಕಳೆದ ಒಂದು ವಾರದ ಹಿಂದೆ ಸುಮಾರು 40 ಸಾವಿರ ರು. ವೆಚ್ಚದಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದರು. ಸದರಿ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ. ಪಟ್ಟು ಬಿಡದ ರಾಜಣ್ಣ ಪುನಃ ತನ್ನ ಜಮೀನಿನಲ್ಲಿ 1100 ಅಡಿ ಆಳದಷ್ಟು ಕೊಳವೆ ಬಾವಿ ಕೊರೆಸಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನಷ್ಟ ಮಾಡಿಕೊಂಡ.
ಈಗಾಗಲೇ ಸ್ಥಳೀಯ ವಿ.ಎಸ್.ಎಸ್.ಎನ್. ಸೇರಿದಂತೆ ಹಲವು ಬ್ಯಾಂಕುಗಳಲ್ಲಿ ಸಾಲವನ್ನು ಪಡೆದಿದ್ದ ರಾಜಣ್ಣ ಇನ್ನು ಮುಂದೆ ಸಂಸಾರ ಸಾಗಿಸುವ ಜವಾಬ್ದಾರಿಯಾದರೂ ಹೇಗೆಂದು ಚಿಂತಿಸಿ ತನ್ನ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಾಸಕರ ಭೇಟಿ: ರೈತನ ಶವವನ್ನು ಶಿರಾ ಸರ್ಕಾರಿ ಆಸ್ಪತ್ರೆಗ ತಂದಾಗ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಮಡಿದ ರೈತನ ಕುಟುಂಬಕ್ಕೆ 10000 ರು. ಸಹಾಯ ಧನ ನೀಡಿದರು. ಜಿ.ಪಂ. ಮಾಜಿ ಸದಸ್ಯ ಪಿ.ಆರ್.ರಮೇಶ್, ಡಿ.ಸಿ.ಅಶೋಕ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹಲಗುಂಡೇ ಗೌಡ ಮತ್ತಿತರರು ಹಾಜರಿದ್ದರು.