ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದು ಮತಾಸ್ತು

Rashmi Kasaragodu
Updated On : 7 Mar 2013, 12:25 pm

ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ  ತುಮಕೂರು  ಮಾ.6
ಮಹಾನಗರಪಾಲಿಕೆ ಹೊಸ್ತಿಲಿನಲ್ಲಿರುವ ತುಮಕೂರು ನಗರಸಭೆಗೆ ನಡೆಯುತ್ತಿರುವ ಕಿರು ಕದನ ಅಕ್ಷರಶಃ ನಾಲ್ಕು ಪ್ರಮುಖ ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದೆ.
ಕಳೆದ ನಗರಸಭೆಯ ಅವಧಿಯಲ್ಲಿ ಯಾಮೊಂದು ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ 6 ಅಧ್ಯಕ್ಷರನ್ನು ಕಂಡ ಕುಖ್ಯಾತಿಗೂ ಪಾತ್ರವಾಗಿತ್ತು. ಈಗ ಮತ್ತೊಂದು ಕಿರು ಕದನ ಆರಂಭವಾಗಿದೆ.
ಕೆಜೆಪಿಗೆ ಬಿಜೆಪಿನೇ ಟಾರ್ಗೆಟ್: ಈ ಬಾರಿ ಕೆಜೆಪಿ ಪಕ್ಷ ಉದಯವಾಗಿದ್ದು ಅದು ಬಿಜೆಪಿ ಮತಗಳನ್ನೇ ನೆಚ್ಚಿಕೊಂಡು ಕೂತಿದೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳು ಕೆಜೆಪಿಗೆ ಹೋಗದಂತೆ ಎಚ್ಚರ ವಹಿಸಲು ಹರಸಾಹಸ ಮಾಡಿದ್ದೇ ಮಾಡಿತು. ಉಳಿದಂತೆ ಕಳೆದ ನಗರಸಭೆ ಅವಧಿಯ ಮೇಲೆ ವಿವಿಧ ಕಾರಣಗಳಿಗೆ ನಡೆದ ನಗರಸಭೆ ಉಪಚುನಾವಣೆಯಲ್ಲಿ ಎಲ್ಲಾ 3 ಕ್ಷೇತ್ರಗಳನ್ನು ಗೆದ್ದ ಜೆಡಿಎಸ್ ಸ್ವಲ್ಪ ಮಟ್ಟಿನ ಹುರುಪಿನಲ್ಲಿದೆ.
ಅಲ್ಲದೇ ಆರಂಭದಲ್ಲೇ ವಾರ್ಡ್ ನಂಬರ್ ಒಂದನ್ನು ಜೆಡಿಎಸ್ ಕಳೆದುಕೊಂಡಿದೆ. ಗೆಲ್ಲುವ ನಿರೀಕ್ಷೆಯಲ್ಲಿದ್ದ ಕ್ಷೇತ್ರಗಳಲ್ಲಿ ವಾರ್ಡ್ ನಂಬರ್ 1 ಕೂಡ ಆಗಿತ್ತು. ಹೀಗಾಗಿ ಜೆಡಿಎಸ್ ಆರಂಭದ ಹಿನ್ನೆಡೆ ಅನುಭವಿಸಿದೆ.
ಎಲ್ಲಾ ಪಕ್ಷಕ್ಕೂ ಪ್ರತಿಷ್ಠೆ: ನಗರಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭಾ ಚುನಾವಣೆಗಳು ಬರುವುದರಿಂದ ಎಲ್ಲಾ ಪಕ್ಷಗಳಿಗೂ ಸ್ಥಳೀಯ ಸಂಸ್ಥೆ ಚುನಾವಣೆ ಸೆಮಿಫೈನಲ್ ರೀತಿಯದ್ದು. ಜಾತ್ಯತೀತ ಮತಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಿತ್ತಾಟ ಮಾಡಿದರೆ ಸಾಂಪ್ರದಾಯಿಕ ಮತಗಳಿಗೆ ಕೆಜೆಪಿ ಮತ್ತು ಬಿಜೆಪಿ ನಡುವೆ ಸಮರ ಸಾರಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳಿಗೂ ಈ ಚುನಾವಣೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿದೆ.
ಯಾರಿಗೂ ಬಹುಮತವಿಲ್ಲ: ನಗರಸಭೆ ಅಧಿಕಾರ ಹಿಡಿಯಲು ಯಾವುದೇ ಪಕ್ಷ 18 ಕ್ಕೂ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಬೇಕು. ಸದ್ಯ ಯಾಮೊಂದು ಪಕ್ಷವೂ 18 ವಾರ್ಡ್‌ಗಳಲ್ಲಿ ಜಯಗಳಿಸುವುದು ಅಸಾಧ್ಯವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಜೆಡಿಎಸ್ ಮುಂದಿದ್ದರೆ, ಇನ್ನು ಕೆಲವಲ್ಲಿ ಕಾಂಗ್ರೆಸ್ ಮುಂದಿದೆ. ಮತ್ತೆ ಕೆಲವು ಕಡೆ ಕೆಜೆಪಿ, ಬಿಜೆಪಿ ಕೂಡ ಸಮಬಲದ  ಹೋರಾಟ ನಡೆಸುತ್ತಿದೆ. ಹೀಗಾಗಿ ಮಾರ್ಚ್ 11ರವರೆಗೆ ಯಾರು ಎಷ್ಟು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಯೋಗ: ಎಲ್ಲಾ ನಾಲ್ಕು ಪ್ರಮುಖ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಯೋಗ ಮಾಡಿದೆ. ಕಳೆದ ಸಲ ನಗರಸಭೆಗೆ ಆಯ್ಕೆಯಾದ ಬಹಳಷ್ಟು ಪ್ರಭಾವಿ ನಾಯಕರಿಗೂ ಪಕ್ಷ ಟಿಕೆಟ್ ನಿರಾಕರಿಸಿದೆ. ಇನ್ನು ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿಗೆ ಜಿಗಿದ ಎಷ್ಟೋ ಮಂದಿಗೂ ಆ ಪಕ್ಷ ಟಿಕೆಟ್ ನಿರಾಕರಿಸಿದೆ. ಉಳಿದಂತೆಈ ನಾಲ್ಕೂ ಪಕ್ಷಗಳಿಗೆ ಕೆಲವು ಕಡೆ ಅಭ್ಯರ್ಥಿಗಳೇ ಸಿಗದಷ್ಟು ಅಸಹಾಯಕರಾಗಿದ್ದರು. ಹೀಗಾಗಿ ಕೆಜೆಪಿ ಮತ್ತು ಬಿಜೆಪಿ ಕೆಲ ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಜೆಡಿಎಸ್‌ದ್ದೂ ಬೇರೆ ಕಥೆ: ಬೇರೆ ಪಕ್ಷಗಳಿಗೆ ಹೋಲಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪೈಪೋಟಿ ಇದೆ. ಹೀಗಾಗಿ ಆ ಪಕ್ಷದ ಟಿಕೆಟ್ ಸಂಭಾವ್ಯರಿಗೆ ಈ ಚುನಾವಣೆ ಒಂದು ಪುಟ್ಟ ಪರೀಕ್ಷೆ ಇದೆ. ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಿಗೆ 3ರಿಂದ 4 ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸ್ವಾತಂತ್ರ್ಯ ನೀಡಲಾಗಿತ್ತು. ಈಗ ಅವರಿಗೆ ಇರುವ ಅಗ್ನಿಪರೀಕ್ಷೆ ಎಂದರೆ ತಾವು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಒತ್ತಡವೂ ಇದೆ.
ಬ್ಯಾನರ್ ಕಟ್ಟೋಕೆ ಜನರಿಲ್ಲ: ಇನ್ನು ಕೆಜೆಪಿ ಪಕ್ಷ ಉದಯವಾಗಿರುವುದರಿಂದ ಬಿಜೆಪಿಯ ಬಹುತೇಕ ಮಂದಿ ಅಲ್ಲಿಗೆ ಜಿಗಿದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಅಕ್ಷರಶ- ಬ್ಯಾನರ್ ಕಟ್ಟಲು ಜನರಿಲ್ಲ. ಹಾಗಂತ ಕೆಜೆಪಿಯವರು ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಅಲ್ಲೂ ಕೂಡ ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲವಿದೆ. ಕಡೇ ಗಳಿಗೆಯಲ್ಲಿ ಕೆಜೆಪಿಯಿಂದ ನಿಷ್ಠೆ ಬದಲಾಯಿಸಿದವರೂ ಇದ್ದಾರೆ. ಹೀಗಾಗಿ ಎರಡು ಪಕ್ಷಗಳು ವಲಸೆ ಸಮಸ್ಯೆಯಿಂದ ಬಳಲುತ್ತಿದೆ.
ಒಟ್ಟಾರೆಯಾಗಿ ವಿಧಾನಸಭಾ ಚುನಾವಣೆಗೆ ನಗರಸಭೆ ಚುನಾವಣೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದು  ಯಾರು ಹಿಡಿತ ಸಾಧಿಸುತ್ತಾರೆ, ಯಾರಿಗೆ ವಿಜಯಮಾಲೆ ಕೊರಳಿಗೆ ಬೀಳುತ್ತದೆ ಎಂಬುದಷ್ಟೆ ಈಗ ಇರುವ ಕುತೂಹಲ.


 ಗೆಲ್ಲೋರಿಗೆ ಹಿಡಿಗಂಟು, ಸೋಲೋರಿಗೆ ಪುಡಿ ಗಂಟು


ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ನೀಡುವ ಪಾರ್ಟಿ ಫಂಡ್‌ನಲ್ಲೂ ಪಕ್ಷಪಾತ ಅನುಸರಿಸಲಾಗಿದೆ. ಚುನಾವಣೆಯನ್ನು ಗೆದ್ದೇ ತೀರಬೇಕೆಂಬ ಹಠದಿಂದಲೋ, ಕೆಪಿಸಿಸಿ ಅಧ್ಯಕ್ಷರ ತವರು ಕ್ಷೇತ್ರ ಎಂಬ ಕಾರಣಕ್ಕೋ ಪಾರ್ಟಿ ಫಂಡ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಉದಾರಿತನ ತೋರಿಸಿದೆ. ಅದು ತನ್ನ ಪಕ್ಷದ ಅಭ್ಯರ್ಥಿಗಳಿಗೆ ತಲಾ 50 ಸಾವಿರ ರು. ಗಳಂತೆ ಹಣ ನೀಡಿದೆ. ಇನ್ನು ಜೆಡಿಎಸ್ 40 ಸಾವಿರಕ್ಕೆ ಸೀಮಿತಗೊಳಿಸಿದೆ. ಬಿಜೆಪಿ 30 ಸಾವಿರ ನೀಡಿದೆ. ಕೆಜೆಪಿ ಕೂಡ ಹಾಗೂ ಹೀಗೂ ಮಿಕ್ಕ ಪಕ್ಷಗಳಷ್ಟೆ ಹಣ ಸುರಿದಿದೆ. ಆದರೆ ಕೆಲವು ವಾರ್ಡ್‌ಗಳಲ್ಲಿ ಗೆಲ್ಲುವ ನಿರೀಕ್ಷೆ ಇರುವ ಅಭ್ಯರ್ಥಿಗಳಿಗೆ ಹೆಚ್ಚು ಹಣ ನೀಡಲಾಗಿದೆ. ಇದರಲ್ಲಿ ಜಾತಿ ಕೂಡ ಕೆಲಸ ಮಾಡಿದೆ. ಇನ್ನು ಫೈಟ್ ಕೊಡಬಲ್ಲರು ಎಂಬ ನಂಬಿಕೆ ಬಂದ ವಾರ್ಡ್‌ಗಳಿಗೂ ಸ್ವಲ್ಪ ಉದಾರಿತನವನ್ನು ಎಲ್ಲಾ ಪಕ್ಷದವರು ತೋರಿದ್ದಾರೆ. ಆಟಕ್ಕುಂಟು ಲೆಕ್ಕಕಿಲ್ಲದ ವಾರ್ಡ್‌ಗಳಲ್ಲಿ ದುಡ್ಡು ಕೊಡುವುದಿರಲಿ ಅತ್ತ ಕಡೆ ಮುಖ ನೋಡಿಯೋ ಪಕ್ಷದ ಮುಖಂಡರು ಮಲಗಿಲ್ಲ. ಹೀಗಾಗಿ ಎಲ್ಲಾ ನಾಲ್ಕು ಪ್ರಮುಖ ಪಕ್ಷಗಳು ಪಾರ್ಟಿ ಫಂಡ್ ನೀಡುವಲ್ಲಿ ಸ್ವಲ್ಪ ಪಕ್ಷಪಾತ ಅನುಸರಿಸಿದೆ. ಆದರೆ ಜೆಡಿಎಸ್‌ನಲ್ಲಿ ಪಾರ್ಟಿ ಫಂಡ್ ಜತೆಗೆ ಟಿಕೆಟ್ ಆಕಾಂಕ್ಷಿಗಳು ಒಂದಷ್ಟು ನೆರವನ್ನು ಅಭ್ಯರ್ಥಿಗಳಿಗೆ ನೀಡಿದ್ದಾರೆ.


 ಕಣಿಟ್ಟಿದ್ದಾರೆ ಪೊಲೀಸರು


ಮುಂದಿನ ವಿಧಾನಸಭೆ ಚುನಾವಣೆಗೆ ಈ ಚುನಾವಣೆ ಕೇವಲ ಅಭ್ಯರ್ಥಿಗಳಿಗಷ್ಟೆ ಸೆಮಿಫೈನಲ್ ಅಲ್ಲ. ಸರ್ಕಾರಿ ಅಧಿಕಾರಿಗಳಿಗೂ ಕೂಡ ಸೆಮಿ ಫೈನಲ್ ಇದ್ದಂತೆ. ಹೀಗಾಗಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರು ನಿರ್ಧರಿಸಿದ್ದಾರೆ. ಹೀಗಾಗಿ ಈ ಚುನಾವಣೆಗೆ 5 ಡಿಎಸ್ಪಿ, 16 ಇನ್ಸ್‌ಪೆಕ್ಟರ್, ಪಿಎಸ್‌ಐ 48, ಮುಖ್ಯಪೇದೆ ಮತ್ತು ಪೇದೆ ಸೇರಿ 700 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅನುಮಾನ ಬಂದರೆ ವಶಕ್ಕೆ ತೆಗೆದುಕೊಳ್ಳೋದು ಗ್ಯಾರಂಟಿ.


 ಜೈಲಲ್ಲಿದ್ದ ಅಭ್ಯರ್ಥಿಗೆ ಬೇಲ್

ಕೊಲೆ ಯತ್ನ ಆರೋಪದಡಿ ಜೈಲು ಸೇರಿದ್ದರೂ, ಕೋರ್ಟ್‌ನಿಂದ ಅನುಮತಿ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ 9 ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದ ಶಿವಪ್ರಸಾದ್ ಅಲಿಯಾಸ್ ಪ್ರೆಸಿಯಾ ಎಂಬ ವ್ಯಕ್ತಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿದೆ. ಚುನಾವಣಾ ಸಂಬಂಧ ಬೇಲ್ ನೀಡುವಂತೆ ಶಿವಪ್ರಸಾದ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇವರಿಗೆ ಸಂಪೂರ ಬೇಲ್ ನೀಡಿದ ಹಿನ್ನೆಲೆಯಲ್ಲಿ, ಜೈಪುರದ ಲಕ್ಷ್ಮಿದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮನೆ ಮನೆ ಪ್ರಚಾರ ಕೈಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments