ಕುತೂಹಲ ಮೂಡಿಸಿರುವ ತಿಪಟೂರು ನಗರಸಭಾ ಕಣ
ತಿಪಟೂರು: ಕಳೆದೆ ಬಾರಿಯ ಚುನಾವಣೆ ವೇಳೆವರೆಗೂ ತಿಪಟೂರು ಪುರಸಭೆಯಾಗಿದ್ದು, ನಂತರ ನಗರಸಭೆ ಆಗಿ ಭಡ್ತಿ ಹೊಂದಿ ಇದೀಗ 2ನೇ ಅವಧಿಯ ನಗರಸಭಾ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿಯ ಪ್ರಥಮ ನಗರಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಆಡಳಿತಾವದಿಯುದ್ದಕ್ಕೂ, ಕಿತ್ತಾಟ, ಅವಿಶ್ವಾಸಗಳ ಸಮರ 3-4 ಬಾರಿ ನಡೆದು ನಗರಸಭಾ ಆಡಳಿತ ನಗೆಪಾಟಲಿಗೀಡಾಗಿದ್ದು, ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಇದೆ. ಕಳದೆ ಅವಧಿಯಲ್ಲಿ 31 ವಾರ್ಡ್ಗಳಿರುವ ನಗರಸಭೆಯಲ್ಲಿ ಜೆಡಿಎಸ್-10, ಬಿಜೆಪಿ-9, ಕಾಂಗ್ರೆಸ್-6, ಪಕ್ಷೇತರ 6 ಸದಸ್ಯರಿದ್ದರು. ಆದರೂ ಬಿಜೆಪಿ ತಂತ್ರಗಾರಿಕೆ ಮುಂದಿಟ್ಟುಕೊಂಡು ಪ್ರಥಮ ನಗರಸಭೆ ಅಧಿಕಾರ ಗದ್ದುಗೆ ಏರಿತ್ತು. ಮೊದಲ ಒಂದೆರಡು ವರ್ಷ ಅಷ್ಟಿಷ್ಟು ಉತ್ತಮ ಆಡಳಿತ ನೀಡಿ 2ನೇ ಅವಧಿಗೆ ಮೀಸಲಾತಿ ಬದಲಾದ ನಂತರವೂ ಬಿಜೆಪಿಯೇ ಆಡಳಿತ ಚುಕ್ಕಾಣಿ ಹಿಡಿಯಿತು. ಆ ನಂತರ ಬಿಜೆಪಿ ಸೃಷ್ಟಿಸಿಕೊಂಡ ಒಳಜಗಳ, ಕಿತ್ತಾಟಗಳಿಂದ ನಗರಸಭೆ ಆಡಳಿತವೇ ಬಹುತೇಕ ದಿಕ್ಕೆಟ್ಟು ಹೋಗಿದ್ದನ್ನು ಜನತೆ ಮರೆತಿಲ್ಲ.
ಈಗಲೂ ಅತಂತ್ರ: 2ನೇ ಅವಧಿಯ ಈ ಚುನಾವಣೆಯೂ ಬಹುತೇಕ ಅತಂತ್ರ ಸ್ಥಿತಿ ನಿರ್ಮಿಸಲಿದೆ ಎಂಬುದು ಹಲವರ ನಂಬಿಕೆ. ಒಟ್ಟು 31 ವಾರ್ಡ್ಗಳಲ್ಲಿ ಕಾಂಗ್ರೆಸ್ 29, ಬಿಜೆಪಿ 27, ಜೆಡಿಎಸ್-29, ಕೆಜೆಪಿ 29, ಬಿಎಸ್ ಆರ್ 10, ಪಕ್ಷೇತರ 36 ಅಭ್ಯರ್ಥಿಗಳು ಸೇರಿ 160 ಮಂದಿ ಕಣದಲ್ಲಿದ್ದಾರೆ.
ಬಿಜೆಪಿ ಪ್ರಥಮ ನಗರಸಭೆಯಲ್ಲಿ ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಜೊತೆಗೆ ಮನೆ ಲೈಸೆನ್ಸ್, ಖಾತೆಯಂತಹ ಸಣಪುಟ್ಟ ಕೆಲಸ ಕಾರ್ಯಗಳಿಗೆ ಸ್ಪಂದಿಸದೆ ಕೇವಲ ಕಾನೂನು ಪರಿಪಾಲನೆ ಜೊತೆಗೆ ಅಭಿವೃದ್ಧಿ ಮಂತ್ರ ಪಠಿಸುತ್ತಲೇ ಗಮನ ಸೆಳೆವ ಕಾರ್ಯವನ್ನೇನೂ ನಡೆಸಿಲ್ಲ. ಜೆಡಿಎಸ್ ಚೇತರಿಸಿಕೊಳ್ಳಲಾರಂತಹ ಒಳಜಗಳಕ್ಕೆ ತುತ್ತಾಗಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಿದೆ. ಕೆಜೆಪಿ ಯಡಿಯೂರಪ್ಪನವರ ಪ್ರಭಾವದ ಜೊತೆಗೆ ಮುಖಂಡ ಲೋಕೇಶ್ವರರ ವೈಯಕ್ತಿಕ ವರ್ಚಸ್ಸನ್ನು ಮುಂದಿಟ್ಟುಕೊಂಡು ಮತದಾರರ ಬಳಿಗೆ ತೆರಳಿದೆ. ಕಾಂಗ್ರೆಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ಸಾಧನೆಗಳಿಲ್ಲದಿದ್ದರೂ, ಕೆಜೆಪಿಯೊಂದಿಗೆ ಸೆಣಸಾಟ ನಡೆಸುವ ಸಾಧ್ಯತೆ ಇದೆ. 10 ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಬಿಎಸ್ ಆರ್ ಕಾಂಗ್ರೆಸ್ ಖಾತೆ ತೆರೆಯಲು ತಮ್ಮೆಲ್ಲಾ ಶಕ್ತಿ-ಯುಕ್ತಿ ಪ್ರಯೋಗಿಸಿದ್ದೇವೆಂದು ಪಕ್ಷದ ತಾಲೂಕು ಅಧ್ಯಕ್ಷ ಯಂದುನಂದನ ಹೇಳುತ್ತಿದ್ದರೆ, 6 ವಾರ್ಡ್ಗಳಲ್ಲಿ ಸ್ಪರ್ರ್ಧಿಸಿರುವ ಪಕ್ಷೇತರರ ಪೈಕಿ ಹೆಚ್ಚಿನವರು ಎಲ್ಲಾ ಪಕ್ಷಗಳಿಗೂ ದೊಡ್ಡ ತೊಡಕಾಗಿ 4 ಅಭ್ಯರ್ಥಿಗಳಾದರೂ ಗೆಲ್ಲುವ ನಿರೀಕ್ಷೆ ಇದೆ.