ತಿಪಟೂರಲ್ಲಿ ಹೆಂಡ, ಮಾಂಸ, ಹಣ, ಹಾಟ್ ಬಾಕ್ಸ್ ಇತ್ಯಾದಿ ಇತ್ಯಾದಿ...
ತಿಪಟೂರು: ನಾಮಪತ್ರ ಸಲ್ಲಿಸಿದ ದಿನದಿಂದ ಮತದಾನದ ಈ ತನಕ ನಗರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದ ಅಭ್ಯರ್ಥಿಗಳು, ಮುಖಂಡರುಗಳು ಮನೆಮನೆಗೆ ಪಾದಯಾತ್ರೆ ಮೂಲಕ ತೆರಳಿ ಕೈಕಾಲು ಹಿಡಿದು, ವಿವಿಧ ಆಮಿಷಗಳನ್ನು ಒಡ್ಡಿ ಮತಯಾಚನೆ ನಡೆಸುತ್ತಿದ್ದಾರೆ. ಆದರೂ ಮತದಾರರಿಂದ ಸ್ಪಷ್ಟವಾದ ಭರವಸೆ ಮಾತ್ರ ಯಾವ ಅಭ್ಯರ್ಥಿಗೂ ಸಿಗುತ್ತಿಲ್ಲ. ಮತದಾನಕ್ಕೆ ಗಂಟೆಗಳ ಲೆಕ್ಕ ಬಾಕಿ ಇರುವಂತೆ ಹಲವಾರು ಮಂದಿ ಅಭ್ಯರ್ಥಿಗಳು ಮತಯಾಚನೆಯ ವರಸೆಯನ್ನೇ ಬದಲಾಯಿಸಿದ್ದಾರೆ. ಮತದಾರರಿಗೆ ವಿವಿಧ ಆಮಿಷಗಳನ್ನು ತೋರಿಸಿ, ಸಾಧ್ಯವಾದಷ್ಟು ಮತಗಳನ್ನು ಸೆಳೆದುಕೊಳ್ಳುವುದಕ್ಕೆ ಮನೆ, ಮನೆಗೂ ಅಲೆದು ತಮ್ಮ ಪಕ್ಷದ ನಾಯಕರನ್ನು ಕರೆತಂದು ಬೆವರು ಹರಿಸಿದ್ದ ಅಭ್ಯರ್ಥಿಗಳು ಈಗ ಸದ್ದಿಲ್ಲದೆ ಹಣ, ಒಡವೆ, ಎಲೆಕ್ಟ್ರಾನಿಕ್ ವಸ್ತುಗಳು, ವಾಚ್, ಹಾಟ್ ಬಾಕ್ಸ್ನಂತಹ ವಸ್ತುಗಳ ಹೊಳೆ ಹರಿಸುವ ಮೂಲಕ ಮತ ಬೇಟೆಗೆ ಪ್ರಜಾಪ್ರಭುತ್ವವೇ ನಾಚುವಂತಹ ಕೆಲಸಕ್ಕೆ ನೇರವಾಗಿ ಇಳಿದಿದ್ದಾರೆ. ಈ ಚುನಾವಣೆಯು ಕೆಲ ಮುಖಂಡರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವುದಲ್ಲದೆ, ಮುಂದೆ ನಡೆಯುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಕಾರಣ ಎಲ್ಲಾ ರಾಜಕೀಯ ಪಕ್ಷಗಳಿಗೂ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬಹುತೇಕ ಕಾನೂನು ಬಾಹಿರ ತಂತ್ರಗಾರಿಕೆಗಳನ್ನು ನಡೆಸುತ್ತಿವೆ. ಒಟ್ಟಿನಲ್ಲಿ ಒಂದೊಂದು ಮತಕ್ಕೆ ಸಾವಿರ, ಸಾವಿರ ಬೆಲೆ ಕಟ್ಟಲಾಗುತ್ತಿದೆ.