ಆರಂಭದಲ್ಲಿ ನೀರಸ, ನಂತರ ಚೇತರಿಕೆ
ಕನ್ನಡಪ್ರಭ ವಾರ್ತೆ ತುಮಕೂರು ಮಾ.7
ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ತುಮಕೂರು ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ, ಸಂಸದ ಜಿ.ಎಸ್. ಬಸವರಾಜ್ ಸೇರಿದಂತೆ ಹಲವಾರು ಮುಖಂಡರು ಗುರುವಾರ ಮತದಾನ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ ಚಿಕ್ಕಪಟೇಯ ಆರ್ಯ ಬಾಲಿಕ ಶಾಲೆಯಲ್ಲಿ ಮತದಾನ ಮಾಡಿದರು. ಹಾಗೆಯೇ ಸಂಸದ ಜಿ. ಎಸ್. ಬಸವರಾಜು ಗಾಂಧಿನಗರದ ಸಿದ್ದಗಂಗಾ ಕಾಲೇಜಿನಲ್ಲಿ ಮತದಾನ ಮಾಡಿದರು. ಕೆಜೆಪಿ ಮುಖಂಡ ಜ್ಯೋತಿಗಣೇಶ್ ಗಾಂಧಿನಗರದ ಸಿದ್ದಗಂಗಾ ಕಾಲೇಜಿನಲ್ಲಿ ಮತದಾನ ಮಾಡಿದರು.
ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ 10 ಗಂಟೆಯ ನಂತರ ಜನ ಉತ್ಸಾಹದಿಂದ ಪಾಲ್ಗೊಂಡು ಮತದಾನ ಮಾಡಿದರು. ಕೆಲವು ವಾರ್ಡ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಹಕ್ಕು ಚಲಾಯಿಸಿದರು. ಮತ್ತೆ ಕೆಲವು ಕಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗಾಂಧಿನಗರದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ 12ನೇ ವಾರ್ಡ್ನ ಮತದಾರರು ಮತದಾನ ಮಾಡಲು ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. 17 ನೇ ವಾರ್ಡ್ನ ಕಾವೇರಿ ಸ್ಕೂಲ್ ಬಳಿ ಮತದಾರರ ಕಾರ್ಡ್ ಇದ್ದರೂ ಸಹ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಹಾಗೂ 18 ನೇ ವಾರ್ಡ್ನಲ್ಲಿ ಇದ್ದ ಪಟ್ಟಿಯು ಬದಲಾಗಿದೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಜೈಪುರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನದ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಶಾಮಿಯಾನ ತೆರವು: ತುಮಕೂರಿನ ಸೋಮೇಶ್ವರಪುರಂ ನ 25 ನೇ ವಾರ್ಡ್ನಲ್ಲಿ ಅಭ್ಯರ್ಥಿ ಕಡೆಯವರು ಕುಳಿತಿದ್ದ ಶಾಮಿಯಾನವನ್ನು ಪೊಲೀಸರು ತೆರವುಗೊಳಿಸಿದರು. ಮಿಕ್ಕಂತೆ ಬಹುತೇಕ ಎಲ್ಲಾ ವಾರ್ಡ್ಗಳಲ್ಲೂ ಜನ ಉತ್ಸಾಹದಿಂದ ಬಂದು ಮತದಾನ ನೆರವೇರಿಸಿದ್ದು ವಿಶೇಷ.
ವೃದ್ಧರು...ಅಂಗವಿಕಲರು: ವಯೋವೃದ್ಧರು, ಅಂಗವಿಕಲರು ಕೂಡ ಗುರುವಾರ ಬೆಳಗ್ಗೆಯೇ ಅತ್ಯುತ್ಸಾಹದಿಂದ ಬಂದು ಮತ ಚಲಾಯಿಸಿದ್ದು ವಿಶೇಷ. ಆಯಾ ಪಕ್ಷಗಳ ಅಭ್ಯರ್ಥಿಗಳ ಪರ ಏಜೆಂಟರು, ಕಾರ್ಯಕರ್ತರು ಕೊನೆ ಕ್ಷಣದ ಮನವೊಲಿಕೆಯಲ್ಲಿ ನಿರತರಾಗಿದ್ದು ಕಂಡು ಬಂತು.
ಒಂದಷ್ಟು ಗೊಂದಲ: ಎಂದಿನಂತೆ ಈ ಬಾರಿಯೂ ಚುನಾವಣೆಯಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿತ್ತು. ಕೆಲ ಮತದಾರರ ವಾರ್ಡ್ಗಳು ಬದಲಾಗಿತ್ತು. ಹೀಗಾಗಿ ಕೆಲ ಸಮಯ ಗೊಂದಲ ಏರ್ಪಟ್ಟಿತ್ತು. ಆದರೆ ಪೊಲೀಸರು ಎಲ್ಲವನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು.