ಮೊರಾರ್ಜಿ ವಿದ್ಯಾರ್ಥಿನಿ ಆತ್ಮಹತ್ಯೆ
ಕ.ಪ್ರ.ವಾರ್ತೆ ತುರುವೇಕೆರೆ ಮಾ.7-
ಇಲ್ಲಿಗೆ ಸಮೀಪದ ಗುಡ್ಡೇನಹಳ್ಳಿ ಯ ಮೊರಾರ್ಜಿ ವಸತಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಹೆಚ್.ಎಸ್.ರಂಜಿತಾ (14) ತಮ್ಮ ವಸತಿ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಗುರುವಾರ ಮಧ್ಯಾಹ್ನ ತನ್ನ ಸಹ ಪಾಠಿಗಳೊಂದಿಗೆ ಊಟ ಮಾಡಿದ್ದ ರಂಜಿತಾ ಊಟದ ತಟ್ಟೆಯನ್ನು ತನ್ನ ಕೊಠಡಿಯಲ್ಲಿ ಇಟ್ಟು ಶೂ ಹಾಕಲು ಬಂದಿದ್ದಾಳೆ. ಇವಳೊಂದಿಗೆ ಇದ್ದ ಸಹಪಾಠಿಗಳನ್ನು ತರಗತಿಗೆ ತೆರಳುವಂತೆ ಹೇಳಿದ ರಂಜಿತಾ ತರಗತಿಗೆ ಬಂದೇ ಇರಲಿಲ್ಲ. ತರಗತಿಯಲ್ಲಿ ಹಾಜರಾತಿ ಹಾಕುವ ವೇಳೆ ರಂಜಿತಾ ಹಾಜರಿರಲಿಲ್ಲ. ಕೊಠಡಿಯಲ್ಲಿ ಇದ್ದ ರಂಜಿತಾಳನ್ನು ಇಬ್ಬರು ಸಹಪಾಠಿಗಳು ನೋಡಲು ತೆರಳಿದ್ದಾರೆ. ಆದರೆ ರಂಜಿತಾ ತಾನಿದ್ದ ಕೊಠಡಿಯನ್ನ ಭದ್ರ ಪಡಿಸಿಕೊಂಡು ಒಳಸೇರಿಕೊಂಡಿರುವ ಬಗ್ಗೆ ವಿದ್ಯಾರ್ಥಿನಿಯರು ಶಿಕ್ಷಕರುಗಳಿಗೆ ತಿಳಿಸಿದ್ದಾರೆ. ಎಲ್ಲರೂ ಬಂದು ಬಾಗಿಲು ಒಡೆದು ನೋಡಲಾಗಿ ರಂಜಿತಾ ತಾನು ಮಲಗುತ್ತಿದ್ದ ಮಂಚವನ್ನು ಎಳೆದುಕೊಂಡು ವೇಲ್ ನ ಸಹಾಯದಿಂದ ಫ್ಯಾನಿಗೆ ನೇಣು ಹಾಕಿಕೊಂಡು ಕೊನೆಯುಸಿರೆಳೆದಿರುವ ಸಂಗತಿ ತಿಳಿಯಿತು. ತಾಲೂಕಿನ ಹಿಂಡುಮಾರನಹಳ್ಳಿಯ ತನ್ನ ಮನೆಗೆ ಹೋಗಬೇಕು. ಆದರೆ ತನ್ನ ತಾಯಿ ಬೈಯುತ್ತಾರೆ ಎಂದು ರಂಜಿತಾ ತನ್ನ ಸಹಪಾಠಿಗಳ ಜೊತೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ. ರಂಜಿತಾಳ ಕುಟುಂಬ ಅತ್ಯಂತ ಬಡ ಕುಟುಂಬವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖಾ ಅಧಿಕಾರಿ ಸಿ.ಟಿ. ಮುದ್ದು ಕುಮಾರ್ ಭೇಟಿ ನೀಡಿದ್ದರು. ಇಲಾಖೆಯ ಹನುಮಂತಯ್ಯ ಸಹ ಭೇಟಿ ನೀಡಿದ್ದರು. ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಹುಶಃ ಕುಟುಂಬದ ವಿಚಾರವಾಗಿ ಆಕೆ ನೇಣಿಗೆ ಶರಣಾಗಿರಬಹುದು ಎಂದು ಮುದ್ದು ಕುಮಾರ್ ಪತ್ರಿಕೆಗೆ ತಿಳಿಸಿದರು. ಇಲಾಖಾ ವತಿಯಿಂದ ಆಕೆಯ ಕುಟುಂಬಕ್ಕೆ ಸೂಕ್ತ ನೆರವು ನೀಡುವ ಭರವಸೆಯನ್ನು ಮುದ್ದು ಕುಮಾರ್ ತಿಳಿಸಿದ್ದಾರೆ. ತಾಪಂ ಅಧ್ಯಕ್ಷ ರಮೇಶ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಮೃತಳ ಕುಟುಂಬಕ್ಕೆ ವೈಯಕ್ತಿಯವಾಗಿ 25 ಸಾವಿರ ರು.ನೀಡುವುದಾಗಿ ಹೇಳಿದರು.