ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳಿಗೆ ಬೆಸ್ಕಾಂ ಬೆಳಕು

Rashmi Kasaragodu
Updated On : 8 Mar 2013, 12:10 pm

ಪ್ರದೀಪ್ ಕುಮಾರ್ ಎಂ.
ಬೆಂಗಳೂರು: ಪರೀಕ್ಷೆಯ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಬಾರಿ ಅನಿಯಮಿತ ಲೋಡ್ಶೆಡ್ಡಿಂಗ್ ಇರುವುದಿಲ್ಲ.
ಬೆಸ್ಕಾಂ ವ್ಯಾಪ್ತಿಯಲ್ಲಿ ಓಪನ್ ಡೆಲ್ಟಾ ಸಿಸ್ಟಂ ಜಾರಿಗೆ ತಂದಿರುವುದರ ಪರಿಣಾಮವಿದು. ಹೌದು, ಸಂಜೆ 6ರಿಂದ ರಾತ್ರಿ 9 ಗಂಟೆವರೆಗೆ ಓಪನ್ ಡೆಲ್ಟಾ ಸಿಸ್ಟಂ ಅಳವಡಿಸಿರುವುದರಿಂದ ಬೆಸ್ಕಾಂಗೆ 210ರಿಂದ 250 ಮೆಗಾವ್ಯಾಟ್ನಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ. ಹೀಗಾಗಿ ಲೋಡ್ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯತೆ ಇಲ್ಲ. ಅಷ್ಟೇ ಅಲ್ಲ, ಪವರ್ ಸ್ಟೇಷನ್ಗಳ ಮೇಲೆ ಲೋಡ್ ಹೆಚ್ಚಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದೂ ಇಲ್ಲ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಓಪನ್ ಡೆಲ್ಟಾ ಸಿಸ್ಟಂ ಅಳವಡಿಸಲಾಗಿದೆ. ಈ ಜಿಲ್ಲೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ಇದ್ದ ವಿದ್ಯುತ್ ಸಮಸ್ಯೆ ನಿವಾರಣೆಯಾದಂತಾಗಿದೆ.
ಮಾರ್ಚ್ 1ರಿಂದ ಈ ಜಿಲ್ಲೆಗಳಲ್ಲಿ ಓಪನ್ ಡೆಲ್ಟಾ ಸಿಸ್ಟಂ ಜಾರಿಗೆ ಬಂದಿದೆ. ಅಂದಿನಿಂದ ಯಾವುದೇ ಭಾಗದಲ್ಲೂ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಬೆಸ್ಕಾಂ ಕಾರ್ಯಾಚರಣೆ ವಿಭಾಗದ ಡಿಜಿಎಂ ವಿ. ಪ್ರಕಾಶ್.
ಯಾಕಾಗಿ ಓಪನ್ ಡೆಲ್ಟಾ ಸಿಸ್ಟಂ?: ರಾಜ್ಯದ ಎಲ್ಲಾ ಕಡೆ ಗ್ರಾಮೀಣ ಪ್ರದೇಶಗಳಲ್ಲಿ ದಿನದ 6 ಗಂಟೆ ತ್ರಿ ಫೇಸ್ ಮತ್ತು 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಅಂದರೆ, ಹಗಲು ಹೊತ್ತು 3 ಗಂಟೆ ಮತ್ತು ರಾತ್ರಿ ವೇಳೆ 3 ಗಂಟೆ ತ್ರಿ ಫೇಸ್ ವಿದ್ಯುತ್ ಒದಗಿಸಲಾಗುತ್ತದೆ. ಸರ್ಕಾರದ ಆದೇಶದಂತೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ತ್ರಿ ಫೇಸ್ ಇಲ್ಲದೇ ಇದ್ದರೂ ಕಡ್ಡಾಯವಾಗಿ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲೇ ಬೇಕು. ಅದರಂತೆ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲಾಗುತ್ತಿತ್ತಾದರೂ ಸಂಜೆ 6ರಿಂದ ರಾತ್ರಿ 9 ಗಂಟೆವರೆಗೆ ಗ್ರಾಮೀಣ ಭಾಗದಲ್ಲಿ ರೈತರು ಸೇರಿದಂತೆ ಸಣ ಪುಟ್ಟ ಉದ್ದಿಮೆ ನಡೆಸುವವರು ಪರಿವರ್ತಕಗಳನ್ನು ಬಳಸಿ ಸಿಂಗಲ್ ಫೇಸ್ ವಿದ್ಯುತ್ ಅನ್ನು ತ್ರಿ ಫೇಸ್ ಆಗಿ ಪರಿವರ್ತಿಸುವುದರಿಂದ ಲೋಡ್ ಹೆಚ್ಚಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು.
ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಅನಿಯಮಿತ ಲೋಡ್ಶೆಡ್ಡಿಂಗ್ ಆಗುತ್ತಿತ್ತು. ಇದನ್ನು ತಪ್ಪಿಸಲು ಓಪನ್ ಡೆಲ್ಟಾ ಸಿಸ್ಟಂ ಜಾರಿಗೆ ತರಲಾಗಿದೆ.
ಏನಿದು ಓಪನ್ ಡೆಲ್ಟಾ ಸಿಸ್ಟಂ: ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವಾಗ ಮೂರು ತಂತಿಗಳ ಪೈಕಿ 2 ತಂತಿಗಳಲ್ಲಿ ವಿದ್ಯುತ್ ಪೂರೈಕೆಯಾಗುತ್ತಿತ್ತು. 3ನೇ ತಂತಿಯಲ್ಲಿ ವಿದ್ಯುತ್ ಪೂರೈಕೆಯಾಗುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಪರಿವರ್ತಕಗಳನ್ನು ಬಳಸಿ ಅದನ್ನು ತ್ರಿ ಫೇಸ್ ಆಗಿ ಪರಿವರ್ತಿಸಲಾಗುತ್ತಿತ್ತು. ಇದರ ಬದಲಾಗಿ ಓಪನ್ ಡೆಲ್ಟಾ ಸಿಸ್ಟಂ ಬಳಸಿದರೆ 3ನೇ ತಂತಿಯಲ್ಲಿ ಸ್ವಲ್ಪವೂ ವಿದ್ಯುತ್ ಪೂರೈಕೆಯಾಗುವುದಿಲ್ಲ. ಅಂದರೆ, 3ನೇ ತಂತಿಯ ವಿದ್ಯುತ್ ಸಂಪರ್ಕವನ್ನು ಪೂರ ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗುತ್ತದೆ ಎಂದು ವಿ. ಪ್ರಕಾಶ್ ಹೇಳುತ್ತಾರೆ.
ರೈತರಿಗೂ ಅನುಕೂಲ: ಓಪನ್ ಡೆಲ್ಟಾ ಸಿಸ್ಟಂ ಅಳವಡಿಕೆಯಿಂದ ರೈತರಿಗೂ ಅನುಕೂಲವಾಗುತ್ತದೆ. ಓಪನ್ ಡೆಲ್ಟಾ ಇದ್ದಾಗ ಉಳಿತಾಯವಾಗುವ ವಿದ್ಯುತ್ಅನ್ನು ತ್ರಿಫೇಸ್ ವಿದ್ಯುತ್ ಪೂರೈಕೆ ಸಂದರ್ಭದಲ್ಲಿ ಒದಗಿಸುವುದರಿಂದ ಹೆಚ್ಚುವರಿ ವಿದ್ಯುತ್ ಪೂರೈಕೆಯಾಗಿ ಪಂಪ್ಸೆಟ್ಗಳು ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮೇಲಾಗಿ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗಿ ಪಂಪ್ಸೆಟ್ಗಳು ಸುಟ್ಟುಹೋಗುವುದನ್ನು ತಪ್ಪಿಸಬಹುದು. ಈ ಎಲ್ಲಾ ಅಂಶ ರೈತರಿಗೂ ಮನದಟ್ಟು ಮಾಡಲಾಗಿದ್ದು, ಅವರು ಕೂಡ ಈ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ


ನಟ ಉಪೇಂದ್ರ ಬ್ರಾಂಡ್ ಅಂಬಾಸಿಡರ್
ಅತ್ಯಧಿಕ ವಿದ್ಯುತ್ ಬೇಡಿಕೆ ಸಮಯದಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡುವ ಉಪಕಗಣಗಳನ್ನು ಬಳಸದಂತೆ ಜಾಗೃತಿ ಮೂಡಿಸಲು ಬೆಸ್ಕಾಂ ಮುಂದಾಗಿದ್ದು, ಇದಕ್ಕಾಗಿ ಚಿತ್ರನಟ ಉಪೇಂದ್ರ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಬಳಸಿಕೊಳ್ಳುತ್ತಿದೆ. ಅಧಿಕ ವಿದ್ಯುತ್ ಬೇಡಿಕೆ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುವ ಮೋಟಾರುಗಳು, ಗೀಸರ್, ವಾಷಿಂಗ್ ಮೆಷಿನ್ ಮತ್ತಿತರ ವಿದ್ಯುತ್ ಉಪಕರಣಗಳನ್ನು ಬಳಸದಂತೆ ಉಪೇಂದ್ರ ಅವರು ಗ್ರಾಹಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಇದಕ್ಕಾಗಿ ಕರಪತ್ರಗಳ ಹಂಚಿಕೆ ಜತೆಗೆ ಕಿರುಚಿತ್ರ ಪ್ರದರ್ಶನವನ್ನೂ ಮಾಡಲು ತೀರ್ಮಾನಿಸಲಾಗಿದೆ.


ವಾರ್ಷಿಕ 250 ಕೋಟಿ ಲಾಭ
ಓಪನ್ ಡೆಲ್ಟಾ ಸಿಸ್ಟಂ ಅಳವಡಿಸಿರುವುದರಿಂದ ಪ್ರತಿನಿತ್ಯ 210ರಿಂದ 250 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗುತ್ತಿದ್ದು, ಇದರಿಂದ ಬೆಸ್ಕಾಂಗೆ ವಾರ್ಷಿಕ 250 ಕೋಟಿ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಅಧಿಕ ಒತ್ತಡದ ಸಂದರ್ಭದಲ್ಲಿ ವಿದ್ಯುತ್ ಖರೀದಿಗೆ ಹೆಚ್ಚು ದರ ನೀಡಬೇಕಾಗುತ್ತದೆ. ಆದರೆ, ಹೊಸ ವ್ಯವಸ್ಥೆಯಿಂದಾಗಿ ಈ ಅವಧಿಯಲ್ಲೇ ವಿದ್ಯುತ್ ಉಳಿತಾಯವಾಗುತ್ತದೆ. ಹೀಗಾಗಿ ಹೆಚ್ಚು ದರ ನೀಡಿ ವಿದ್ಯುತ್ ಖರೀದಿಸಬೇಕಾದ ಅಗತ್ಯವಿಲ್ಲ. ಇರುವ ವಿದ್ಯುತ್ತನ್ನೇ ಸಮರ್ಪಕವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಹೀಗೆ ವಿದ್ಯುತ್ ಖರೀದಿ ಕಡಿಮೆಯಾಗುವುದರಿಂದ ಬೆಸ್ಕಾಂಗೆ ಲಾಭವಾಗುತ್ತದೆ.


ಜಾಗೃತದಳ ರಚನೆ

ಇಷ್ಟೇ ಅಲ್ಲ, ರಾತ್ರಿ ವೇಳೆ ಅತ್ಯಧಿಕ ವಿದ್ಯುತ್ ಬೇಡಿಕೆ ಅವಧಿಯಲ್ಲಿ ಅನಧಿಕೃತ ವೆಲ್ಡಿಂಗ್, ದೀಪ, ವಿದ್ಯುತ್ ಕಳ್ಳತನ ಪತ್ತೆಹಚ್ಚಲು ಜಾಗೃತ ದಳ ರಚನೆ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ 30 ವಾಹನ ಸೌಲಭ್ಯ ಮತ್ತು ಸಿಬ್ಬಂದಿ ಒದಗಿಸಲಾಗಿದೆ. ಜಾಗೃತದಳ ಮತ್ತು ಬೆಸ್ಕಾಂ ಅಧಿಕಾರಿಗಳು ರಾತ್ರಿ ವೇಳೆ ಕಟ್ಟುನಿಟ್ಟಿನ ಪಹರೆ ಕಾರ್ಯ ನಡೆಸುತ್ತಿದ್ದು, ಪ್ರತಿ ದಿನ ಸುಮಾರು 1500ರವರೆಗೆ ತಪಾಸಣೆಗಳನ್ನು ಕೈಗೊಂಡು ವಿದ್ಯುತ್ ದುರ್ಬಳಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಸುಮಾರು 60 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗುತ್ತಿದೆ.


ಓಪನ್ ಡೆಲ್ಟಾ ಸಿಸ್ಟಂ ಅಳವಡಿಸಿರುವುದರಿಂದ ರಾತ್ರಿ ವೇಳೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗಿದೆ ಎಂಬುದೇ ಅತ್ಯಂತ ಖುಷಿ ಕೊಡುತ್ತದೆ. ಮನೆಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದೆ. ಇನ್ನೂ ಸಣಪುಟ್ಟ ಕೆಲಸಗಳಿದ್ದು, ಅದನ್ನು ಶೀಘ್ರ ಮುಗಿಸಲಾಗುವುದು.
ಟಿ ಪಿ. ಮಣಿವಣನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement