ಫಲಿತಾಂಶದ್ದೇ ಲೆಕ್ಕಾಚಾರ
ಕ.ಪ್ರ.ವಾರ್ತೆ ಕುಣಿಗಲ್ ಮಾ.8
ಗುರುವಾರ ನಡೆದ ಪುರಸಭಾ ಚುನಾವಣೆಯಲ್ಲಿ 23 ವಾರ್ಡ್ಗಳ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಅಡಗಿದ್ದು, ಪಟ್ಟಣದ ಮಹಾತ್ಮಗಾಂಧಿ ಪ.ಪೂ. ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಸಶಸ್ತ್ರ ಪೊಲೀಸ್ ಬೆಂಗಾವಲಿನಲ್ಲಿ ಸುರಕ್ಷಿತವಾಗಿದೆ.
ಈ ಮದ್ಯೆ ಪುರಸಭೆ ಚುನಾವಣೆಯಲ್ಲಿ ಅತ್ಯಧಿಕ ಶೇ.85.02 ರಷ್ಟು (21369 ಮತದಾರರಿಗೆ 18167 ಮಂದಿ ಮತ ಚಲಾವಣೆ ಮಾಡಿದ್ದು) ಮತದಾನವಾಗಿರುವುದು ಕೆಲ ಅಭ್ಯರ್ಥಿಗಳ ಪಾಲಿಗಂತೂ ನುಂಗಲಾರದ ತುತ್ತಾಗಿ ಪರಿಣಮಿಸಿದರೆ, ಹೆಚ್ಚಿನ ಸಂಖ್ಯೆ ಅಭ್ಯರ್ಥಿಗಳಿರುವ ವಾರ್ಡ್ನಲ್ಲಿ ಬೆರೊಂದು ಲೆಕ್ಕಾಚಾರಕ್ಕೆ ಕಾರಣವಾಗಿದೆ. ಪುರಸಭೆಯ 1ನೇ ವಾರ್ಡ್ನಲ್ಲಿ ಶೇಕಡಾ 95ರಷ್ಚು ಅತ್ಯಧಿಕ ಮತದಾನವಾಗಿದ್ದು,ಕಡಿಮೆ ಮತದಾನ 8ನೇ ವಾರ್ಡ್ನಲ್ಲಿ ಶೇ.77.06 ಆಗಿದ್ದರೆ, 5ನೇ ವಾರ್ಡ್ನಲ್ಲಿ ಶೇ.89.20, 6ನೇ ವಾರ್ಡ್ ಶೇ.89.96, 9 ನೇ ವಾರ್ಡ್ ಶೇ.87.91, 17ನೇ ವಾರ್ಡ್ ಶೇ.90, 18ನೇ ವಾರ್ಡ್ ಶೇ.86, 31ನೇ ವಾರ್ಡ್ ಶೇ.88.65, 22ನೇ ವಾರ್ಡ್ ಶೇ.85.21 ರಷ್ಟು ಮತದಾನವಾಗಿದೆ. ಪಟ್ಟಣದ ಪ್ರತಿಷ್ಟಿತ ವಾರ್ಡ್ಗಳಾದ 12, 23, 04, 15, 19ನೇ ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ದಂಧೆ ಜೋರಾಗಿದೆ. 12ನೇ ವಾರ್ಡ್ನಲ್ಲಿ ಪುರಸಭೆ ಮಾಜಿ ಅಧ್ಯಕ್ಷ ನಂಜುಂಡಯ್ಯ ವರ್ಸಸ್ ಮಾಜಿ ಉಪಾಧ್ಯಕ್ಷ ರಂಗಸ್ವಾಮು ಗೆಲುವಿನ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಮತಪಟ್ಟಿ ಗೊಂದಲಗಳಿಂದಾಗಿ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ವಂಚಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಲೋಪ, ದೋಶ ಸರಿಪಡಿಸುವಂತೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ.