ವಿಶೇಷ ಕೈಮಗ್ಗ ಮೇಳಕ್ಕೆ ಡಿಸಿ ಚಾಲನೆ
ಕನ್ನಡಪ್ರಭ ವಾರ್ತೆ ತುಮಕೂರು ಮಾ.8
ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕದ ಸಹಯೋಗದಲ್ಲಿ ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಅಂಗವಾಗಿ ತುಮಕೂರಿನಲ್ಲಿ ಮಾ.22 ರವರೆಗೆ ಶ್ರೀಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿರುವ ವಿಶೇಷ ಕೈಮಗ್ಗ ಮೇಳಕ್ಕೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಚಾಲನೆ ನೀಡಿದರು.
ನೇಕಾರರಿಂದ ಗ್ರಾಹಕರಿಗೆ ಎಂಬ ಘೋಷವಾಕ್ಯದಡಿ ನೇಕಾರರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಿದ್ದು, ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಮೇಳವನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದರು.
ನಂತರ ಪ್ರತಿ ಮಳಿಗೆಗೆ ತೆರಳಿ ನೇಕಾರರು ಮಾರಾಟಕ್ಕೆ ಇಟ್ಟಿರುವ ವಸ್ತುಗಳನ್ನು ಪರೀಕ್ಷಿಸಿ ಅವುಗಳ ಬೆಲೆ ತಿಳಿದುಕೊಂಡ ಜಿಲ್ಲಾಧಿಕಾರಿ ನೇಕಾರರಿಗೆ ಕುಂದುಕೊರತೆಗಳನ್ನು ವಿಚಾರಿಸಿದರು.
ಮೇಳದ ಬಗ್ಗೆ ಮಾಹಿತಿ ನೀಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಗಂಗಯ್ಯ, ಈ ಮೇಳದಲ್ಲಿ ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ದಾವಣಗೆರೆ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಮತ್ತು ಉತ್ತರ ಪ್ರದೇಶದ ಕೈಮಗ್ಗ ನೇಕಾರರ ಸಂಘಗಳು ಭಾಗವಹಿಸುತ್ತಿವೆ. ಒಟ್ಟು 40 ಮಳಿಗೆಗಳು 15 ದಿನಗಳ ಕಾಲದ ಈ ವಿಶೇಷ ಕೈಮಗ್ಗ ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಮೇಳದಲ್ಲಿ ಭಾಗವಹಿಸುವ ಕೈಮಗ್ಗ ನೇಕಾರರಿಗೆ ಕೇಂದ್ರ ಸರ್ಕಾರ ಶೇ.20ರಷ್ಟು ಸಹಾಯಧನವನ್ನು ಮಾರಾಟವಾದ ವಸ್ತುಗಳ ಮೇಲೆ ನೀಡಲಿದ್ದು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೈಮಗ್ಗದ ರೇಷ್ಮೆ, ಉಣೆ ಮತ್ತು ಕಾಟನ್ ಸೊಸೈಟಿಗಳು ಮೇಳದಲ್ಲಿ ಭಾಗವಹಿಸಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮೇಳದಲ್ಲಿ ಕಾಟನ್ ಶರ್ಟ್ ಖುರ್ತಾ, ರೇಷ್ಮೆ ಸೀರೆ, ಕಾಟನ್ ಸೀರೆ, ಕುರಿ ಕಂಬಳಿ,ಉತ್ತರದ ಪ್ರದೇಶದ ಜಮಕಾನ, ಟವಲ್, ಲುಂಗಿ ಮತ್ತಿತರ ವಸ್ತ್ರಗಳು ದೊರೆಯಲಿವೆ. 15 ದಿನದಲ್ಲಿ ಐವತ್ತು ಸಾವಿರ ಗ್ರಾಹಕರ ಭೇಟಿ ನೀಡುವ ನಿರೀಕ್ಷೆಯಿದೆ. 50 ಲಕ್ಷ ವ್ಯವಹಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ ಎಂದು ಗಂಗಯ್ಯ ತಿಳಿಸಿದರು.
ಈ ಸಂದರ್ಭ ಜವಳಿ ವಿಸ್ತರಣಾಧಿಕಾರಿ ಸಂತೋಷ್, ತನಿಖಾಧಿಕಾರಿ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.