ಕೆವಿಕೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ತಿಪಟೂರು: ತಾಲೂಕಿನ ಬಿದರಮ್ಮನಗುಡಿ ಕಾವಲ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಠಲಾಪುರ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ರೇಷ್ಮೆ ಉಪನಿರ್ದೇಶಕರಾದ ನಂಜಪ್ಪನವರು ಉದ್ಘಾಟಿಸಿ, ಮಹಿಳಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕೇಂದ್ರದ ವಿಜ್ಞಾನಿ ಡಾ.ಎಚ್.ಎಸ್.ಮಮತಾ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿರುವ ವಿವಿಧ ಸಾಧನೆಗಳನ್ನು ವಿಶ್ಲೇಷಿಸಿ, ಮಹಿಳೆಯರ ಸಬಲೀಕರಣದಲ್ಲಿ ಸಂಘಟನೆಯ ಉದ್ದೇಶ ಮತ್ತು ಮಹತ್ವವನ್ನು ತಿಳಿ ಹೇಳಿದರು. ಡಾ.ಬಿ.ಮಮತ ಗ್ರಾಮ ಮಟ್ಟದಲ್ಲಿ ರೈತ ಮಹಿಳೆಯರು ವಿವಿಧ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಬಲೀಕರಣ ಹೊಂದಬೇಕೆಂದು ಕರೆ ನೀಡಿದರು. ಕೃಷಿ ವಿಸ್ತರಣೆಯ ವಿಷಯದ ತಜ್ಞರಾದ ಶಂಕರ್ ಕೇಂದ್ರದ ವತಿಯಿಂದ ರೈತ ಮಹಿಳೆಯರಿಗೆ ಕೊಡುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಂತ ಉದ್ಯೋಗದತ್ತ ದಾಪುಗಾಲು ಹಾಕಬೇಕೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಸುಮಾರು 80ಕ್ಕೂ ಹೆಚ್ಚು ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.