ಗನ್ ಹಿಡಿದು ಬೆದರಿಸಿ, ಅಕ್ರಮ ಮರಳು ದಂಧೆ
ಕ.ಪ್ರ.ವಾರ್ತೆ ತುಮಕೂರು ಮಾರ್ಚ್ 9
ತುಮಕೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ-ಗಣಿಗಾರಿಕೆ ಎಗ್ಲಿಲ್ಲದೆ ನಡೆದಿದೆ. ಅಧಿಕಾರಿಗಳಿಗೆ ಗನ್ ಹಿಡಿದು ಬೆದರಿಸಿ ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಇತರೆ ತಾಲೂಕುಗಳಲ್ಲಿ ಮರಳು ಲೂಟಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದರೂ ಏನೂ ಮಾಡಲಾಗುತ್ತಿಲ್ಲ. ಯಾರ ವಿರುದ್ಧವೂ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಎಂದು ಎಂದು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ಅಕ್ರಮ ಮರಳು ದಂಧೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಈ ಅಕ್ರಮ ಮರಳು ದಂಧೆಯಿಂದಾಗಿ ಅಂತರ್ಜಲ ಮಟ್ಟ 1000 ಅಡಿಗೂ ಕೆಳಕ್ಕೆ ಕುಸಿದಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗುವ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವವೋ, ಸರ್ವಾಧಿಕಾರವೋ: ಗನ್ ಹಿಡಿದು ಬೆದರಿಸಿ, ಮರಳು ದಂಧೆ ನಡೆಸುತ್ತಿರುವುದನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಲ್ಲಿದ್ದೆವೋ, ಅಥವಾ ಸರ್ವಾಧಿಕಾರಿ ಪ್ರಭುತ್ವದಲ್ಲಿವೋ ಎಂಬ ಅನುಮಾನಗಳು ಕಾಡತೊಡಗಿವೆ. ಶಿರಾದ ಮೊದಲೂರು ಕೆರೆ ಜಿಲ್ಲೆಯ ಅಕ್ರಮ ಮರಳು ದಂಧೆಯಲ್ಲಿ ನಂ. 1 ಸ್ಥಾನದಲ್ಲಿದೆ. ನಂತರದಲ್ಲಿ ಕೊರಟಗೆರೆ, ಮಧುಗಿರಿ ಹಾಗೂ ಇತರೆ ತಾಲೂಕುಗಳು ಬರುತ್ತವೆ. ನೂರಾರು ಅಡಿ ಆಳಕ್ಕೆ ಕೊರೆದು ಮರಳು ದಂಧೆ ನಡೆಸಲಾಗುತ್ತಿದೆ. ಒಟ್ಟಾರೆ ಪರಿಸ್ಥಿತಿ ಭೀಕರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆತಂಕ ವ್ಯಕ್ತಪಡಿಸಿದರು.
ಎಚ್ಚರಿಕೆ ಕೊಟ್ಟ ದಿನವಷ್ಟೆ ಕಂಟ್ರೋಲ್: ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ದಿನ ಮಾತ್ರ ಈ ಅಕ್ರಮ ಮರಳು ದಂಧೆ ಕಂಟ್ರೋಲ್ ಆಗುತ್ತೆ. ಮತ್ತೆ ಮರುದಿನ ಅದೇ ಹಳೇ ಚಾಳಿ ಶುರುವಾಗುತ್ತೆ. ಏನ್ಮಾಡೋದು ಎಂದು ತಮ್ಮ ಅಸಹಾಯಕತೆ ತೋಡಿಕೊಂಡ ಪ್ರಸಂಗವೂ ಸುದ್ದಿಗೋಷ್ಠಿಯಲ್ಲಿ ನಡೆಯಿತು.
ತಹಶೀಲ್ದಾರ್‌ಗಳಿಗೆ ಮುನ್ನೆಚ್ಚರಿಕೆ: ಗನ್ ಹಿಡಿದು ಬೆದರಿಕೆ ಹಾಕಿ ಮರಳು ಲೂಟಿ ಮಾಡುವ ಮಂದಿಯತ್ತ ಹೋಗುವ ಮುನ್ನ, ಆಯಾ ತಾಲೂಕುಗಳ ತಹಸೀಲ್ದಾರ್‌ಗಳು ಅಗತ್ಯ ಪೊಲೀಸ್ ರಕ್ಷಣೆಯೊಂದಿಗೆ ತೆರಳುವಂತೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಒಬ್ಬೊಬ್ಬರೇ ಹೋಗದಂತೆ ಸೂಚಿಸಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
ಹಿಂಜರಿದ ಸಚಿವರು: ಮರಳು ದಂಧೆಯಲ್ಲಿ ನಂ. 1 ಸ್ಥಾನದಲ್ಲಿರುವ ಶಿರಾದ ಮೊದಲೂರು ಕೆರೆ ಸೇರಿದಂತೆ ಕೊರಟಗೆರೆ, ಮಧುಗಿರಿಯೆಡೆ ತೆರಳಿ ತಾವೇಕೆ ಸ್ಥಳ ಪರಿಶೀಲನೆ ನಡೆಸಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಾರದು ಎಂಬ ಪ್ರಶ್ನೆಗೆ, ಸಚಿವರು ಮೊದಲಿಗೆ ಹಿಂಜರಿದರು. ನಂತರ ಕೆಲ ದಿನಗಳ ನಂತರ ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ಜಿಲ್ಲೆಯಿಂದ ಸಾಗಾಟವಾಗುವ ಎಲ್ಲ ಅಕ್ರಮ ಮರಳು ಕೂಡ ತುಮಕೂರು ಮಾರ್ಗವಾಗೇ ಹೋಗಬೇಕು. ದಾಬಸ್‌ಪೇಟೆ ಬಳಿಯ ಜಾಸ್‌ಟೋಲ್ ಗೇಟ್ ಬಳಿ ಹೋದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಇದೊಂದು ಸ್ಯಾಂಪಲ್ ಅಷ್ಟೆ ಎಂದಾಗ, ಸಚಿವರು ಸಮರ್ಪಕ ಉತ್ತರ ನೀಡಲಿಲ್ಲ.
ಬೇಲಿಯೇ ಎದ್ದು ಹೊಲ ಮೇಯುತ್ತಿದೆ: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಅಕ್ರಮ ಮರಳು ದಂಧೆಗೆ ಸಪೋರ್ಟ್ ಮಾಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಸಚಿವರು ಆರೋಪಿಸಿದರು. ಇಂತಹ ಅಸಹನೀಯ ವಾತಾವರಣದಲ್ಲಿ ನಾವಿದ್ದೇವೆ. ನಾನು ನಿಜಕ್ಕೂ ಅಸಹಾಯಕನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅಲವತ್ತುಕೊಂಡರು.