ಶಾಸಕ ರಾಮಸ್ವಾಮಿಗೌಡರಿಗೆ ಬಂಧನ ವಾರಂಟ್ ಜಾರಿ
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಶಾಸಕ, ಕಾಂಗ್ರೆಸ್ನ ಬಿ.ಬಿ.ರಾಮಸ್ವಾಮಿಗೌಡ ಅವರ ಬಂಧನಕ್ಕೆ ನಗರದ 13ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಪದೇ ಪದೇ ಗೈರುಹಾಜರಾದ ರಾಮಸ್ವಾಮಿಗೌಡರ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಬಂಧನದ ವಾರಂಟ್ ಜಾರಿ ಮಾಡಿದ್ದಾರೆ.
ತುಮಕೂರು ಮೂಲದ ಲೋಕೇಶ್ ಎಂಬವರಿಗೆ ರಾಮಸ್ವಾಮಿಗೌಡ ಅವರು ಚೆಕ್ ನೀಡಿದ್ದರು. ಅದು ಬೌನ್ಸ್ ಆಗಿತ್ತು. ಈ ವಿಷಯವನ್ನು ಲೋಕೇಶ್ ಅವರು ರಾಮಸ್ವಾಮಿ ಗೌಡರ ಗಮನಕ್ಕೆ ತಂದಿದ್ದರೂ ಹಣ ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಲೋಕೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಆದೇಶಿಸಿದರೂ ರಾಮಸ್ವಾಮಿಗೌಡ ಹಾಜರಾಗಿರಲಿಲ್ಲ.