ಹಗಲು ರಾತ್ರಿ ಅಖಂಡ ಶಿವಯಜ್ಞ
ಪಾವಗಡ: ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಕಳೆದ 8 ದಿನಗಳಿಂದ ಹಗಲು ರಾತ್ರಿ ಅಖಂಡ ಶಿವಯಜ್ಞ ಪೂಜೆ ಹಾಗೂ ಭಜನೆ ಕಾರ್ಯಕ್ರಮವನ್ನು ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮದ ಶ್ರೀ ನಿತ್ಯಾನಂದ ಅವಧೂತರ ಆಶ್ರಮದಲ್ಲಿ ಹಮ್ಮಿಕೊಂಡಿದ್ದಾರೆ.
12ನೇ ವರ್ಷದ ಶಿವ ಸಪ್ತಾಹ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಹಾರಾಷ್ಟ್ರದ ಮುಂಬೈ ನಗರದ ಗಣೇಶ್ ಪುರಿಯ ಶ್ರೀ ನಿತ್ಯಾನಂದ ಅವಧೂತರು ಹಾಗೂ ಮೈಸೂರಿನ ಶ್ರೀ ರಾಜಯೋಗಿ ಕರೀಂಪೀರ ಚಂದ್ರ ಸ್ವಾಮೀಜಿಗಳ ಜ್ಞಾಪಕಾಥವಾಗಿ ಅಖಂಡ ಶಿವಯಜ್ಞ ನಡೆಯುತ್ತಿದೆ. ಬೆಸ್ಕಾಂನ ಸಿ.ಎನ್. ಯರಪ್ಪ ಹಾಗೂ ಕುಟುಂಬದವರಿಂದ ಭಾನುವಾರ ಪೂಜಾ ಕಾರ್ಯಕ್ರಮ ಹಾಗೂ ಪಂಚಾಕ್ಷರಿ ಮಂತ್ರ ನಡೆಯಲಿದ್ದು ಸೋಮವಾರ ಹೋಮದ ಮೂಲಕ ಶಿವಯಜ್ಞ ಮುಕ್ತಾಯವಾಗಲಿದೆ. ಆಶ್ರಮಕ್ಕೆ ಸೂಕ್ತ ರಸ್ತೆ, ಕುಡಿಯುವ ನೀರು ಹಾಗೂ ಸಮುದಾಯಭವನ ಮುಂತಾದ ಸೌಲಭ್ಯ ಕಲ್ಪಿಸಿಕೊಡಲು ಗುರುಪೀಠದ ಗುರು ಗೆಜ್ಜೆಗೌಡರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.