ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಸಂಬದ್ಧ, ಅಪ್ರಬುದ್ಧ ಧಾರಾವಾಹಿಗಳು

Rashmi Kasaragodu
Updated On : 11 Mar 2013, 12:03 pm

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.10
ಒಂದೆಡೆ ಅಸಂಬದ್ಧ, ಅಪ್ರಬುದ್ದ ಧಾರಾವಾಹಿಗಳು, ಮತ್ತೊಂದೆಡೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಬಿಂಬಿಸುವ, ಕೌಟುಂಬಿಕ ವಿಚಾರಗಳನ್ನು ವೈಭವೀಕರಿಸುವ ವಾಹಿನಿಗಳಿಂದಾಗಿ ಮಹಿಳೆಯರ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ ಎಂದು ಪತ್ರಕರ್ತೆ ಸುಚೇತನಾ ನಾಯ್ಕ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯಾಚಾರ, ಸಾಮಾಜಿಕ ಪರಿಣಾಮಗಳು ಹಾಗೂ ಮಾಧ್ಯಮಗಳ ಪಾತ್ರ ಕುರಿತು ಮಾತನಾಡಿದರು.
ಕೌಟುಂಬಿಕ ಸಮಸ್ಯೆಗಳ ಪ್ರಕರಣಗಳು ಮಾಧ್ಯಮಗಳ ಮುಂದೆ ಹೋಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ವಿಮರ್ಶೆ ನಡೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಬೇರೆಲ್ಲಾ ಅಂಗಗಳಿಗಿಂತ ಮಾಧ್ಯಮ ರಂಗ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ. ಈ ನಮ್ಮ ವ್ಯವಸ್ಥೆಯಲ್ಲಿ ಮಹಿಳೆ ನ್ಯಾಯ ದೊರಕಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸಾಕ್ಷ್ಯಾಧಾರಗಳ ಕೊರತೆ, ಪೊಲೀಸರ ಅಸಮರ್ಪಕ ಕಾರ್ಯನಿರ್ವಹಣೆ, ಅಸಂಬದ್ಧ ತನಿಖೆ, ವಕೀಲರ ವಿಳಂಬ ನೀತಿ ಇವೆಲ್ಲಗಳೆಲ್ಲದರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ವೈಫಲ್ಯತೆ ಉಂಟಾಗಿದೆ ಎಂದು ಅಳರು ವ್ಯಾಖ್ಯಾನಿಸಿದರು.
ವ್ಯವಸ್ಥೆ ಬಗ್ಗೆ ಭ್ರಮ ನಿರಸನ: ಕೌಟುಂಬಿಕ ಸಮಸ್ಯೆಗಳು ಮಾಧ್ಯಮಗಳ ಮುಂದೆ ಹೋಗುತ್ತಿರುವುದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವೂ ಒಂದು ಕಾರಣ ಎಂದು ವಿಶ್ಲೇಷಿಸಿದ ಅವರು, ಜನತೆ ಭ್ರಮ ನಿರಸನಗೊಂಡಾಗ ತಕ್ಷಣಕ್ಕೆ ಪರಿಹಾರ ಹುಡುಕಿ ಹೊರಡುತ್ತಾರೆ. ಆಗ ಅವರಿಗೆ ಎದುರಿಗೆ ಸಿಗುವುದೇ ಮಾಧ್ಯಮಗಳು. ಮಾಧ್ಯಮಗಳ ಮುಂದೆ ತಮ್ಮ ಮೇಲಾದ ದೌರ್ಜನ್ಯಗಳನ್ನು ತೋರಿಸಿಕೊಳ್ಳಲು ಹೋಗಿ, ಕೌಟುಂಬಿಕ ಸಮಸ್ಯೆಯ ಚಿತ್ರಣ ಬಿಚ್ಚಿಡುತ್ತಾರೆ. ಇದು ಸರಿ ಅಥವಾ ತಪ್ಪು ಎಂಬುದು ಅವರಿಗೆ ಅರಿವಾಗುವುದೇ ಇಲ್ಲ ಎಂದು ವಿಷಾದಿಸಿದರು.
ಮಾಧ್ಯಮದ ಕುರಿತು ಚರ್ಚೆ ಅಗತ್ಯ: ಮಹಿಳೆಯರ ಶೋಷಣೆ ತಡೆ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ. ಸಂವಿಧಾನದ ಅಧಿಕೃತ 3 ಅಂಗಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಮಾಧ್ಯಮ ರಂಗ ಬೇರೆಲ್ಲಾ ರಂಗಗಳ ಮೇಲೆ ಒಂದು ರೀತಿಯ ಹಿಡಿತ ಸಾಧಿಸುತ್ತಿದೆ. ಒಂದು ರೀತಿಯ ಭಯದ ವಾತಾವರಣವೂ ಕೆಲವೊಮ್ಮೆ ನಿರ್ಮಾಣವಾಗುತ್ತದೆ. ದೆಹಲಿಯ ಗ್ಯಾಂಗ್ ರೇಪ್ ಪ್ರಕರಣವೂ ಸಹ ಮಾಧ್ಯಮಗಳ ಮೂಲಕವೇ ಅತಿ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಪ್ರಖರತೆ ಪಡೆದುಕೊಳ್ಳಲು ಸಾಧ್ಯವಾಯಿತು. ಹೀಗಾಗಿ ಮಾಧ್ಯಮ ರಂಗದ ಬಗ್ಗೆ ಚರ್ಚೆ ಅತ್ಯಗತ್ಯ ಎಂದರು. ಮಹಿಳೆಯರು ಸಂಘಟನೆಗೊಳ್ಳುವ ಮೂಲಕ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಚಿಂತನೆ ಅತ್ಯಗತ್ಯ. ಮಾಧ್ಯಮಗಳು ಮಹಿಳೆಯರ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಜವಾಬ್ದಾರಿ ನಿರ್ವಹಿಸುತ್ತಿವೆ ಎಂದರು.
ಪ್ರಬಲ ಕಾನೂನು ಅಗತ್ಯ: ವಕೀಲೆ ಗೀತಾ ಮಾತನಾಡಿ, ಹೆಣ್ಣಿನ ಮೇಲೆ ನಡೆಯುವ ಬಹುತೇಕ ದೌರ್ಜನ್ಯ ಪ್ರಕರಣಗಳು ದಾಖಲಾಗದೇ ಮುಚ್ಚಿ ಹೋಗುತ್ತಿದ್ದು, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ತ್ರೀಯರ ಮೇಲಿನ ನಿರಂತರ ದೌರ್ಜನ್ಯ ತಡೆಗೆ ಇನ್ನಷ್ಟು ಪ್ರಬಲ ಕಾನೂನು ತರುವ ಅಗತ್ಯವಿದೆ. ಮಹಿಳಾ ದೌರ್ಜನ್ಯ, ಕಿರುಕುಳ ಪ್ರಕರಣ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ, ವಕೀಲರನ್ನು ನೇಮಿಸುವ ತುರ್ತಿದೆ ಎಂದರು.
ಮಹಿಳೆಯರೇ ಅಪರಾಧಿ ಸ್ಥಾನದಲ್ಲಿ: ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಮಾಜ ಮಹಿಳೆಯರನ್ನೇ ಅಪರಾಧಿ ಸ್ಥಾನದಲ್ಲಿ ನೋಡುತ್ತಿದೆ. ಸಾಕಷ್ಟು ಪ್ರಕಣರಗಳಲ್ಲಿ ಅಪರಾಧ ಮಾಡಿದವರು ರಾಜಾ ರೋಷವಾಗಿ ಓಡಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಮತ್ತಷ್ಟು ಕುಗ್ಗಿ, ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ ಎಂದು ವಿಷಾದಿಸಿದರು.
ಸಹಿಸಿಕೊಳ್ಳಬಾರದು: ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಎಂ. ರಜನಿ ಮಾತನಾಡಿ,  ಅತ್ಯಾಚಾರ ಎಂಬುದು ಕೇವಲ ದೈಹಿಕ ಹಿಂಸೆಯಲ್ಲ. ಅದೊಂದು ಆತ್ಮಕ್ಕೆ ಎಸಗುವ ಅಪಚಾರ. ತಿಂಗಳು, ವರ್ಷಗಟ್ಟಲೆ ಜತೆಯಲ್ಲಿದ್ದು ಕೈ ಕೊಡುವ ಹುಡುಗರಿಗೆ ಏನೆನ್ನಬೇಕು, ಇದು ಕೂಡ ಅತ್ಯಾಚಾರ ಪ್ರಕರಣವಲ್ಲದೆ ಬೇರಲ್ಲ. ಇವುಗಳ ಬಗ್ಗೆ ಗಂಭೀರ ಚಿಂತನೆ ಹಾಗೂ ಕಾನೂನಿನಲ್ಲಿ ಕಠಿಣ ಶಿಕ್ಷೆಯ ಮಾರ್ಪಾಟು ಅಗತ್ಯವಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಆಶಯ ನುಡಿಗಳನ್ನಾಡಿದರು. ಎಂ.ಬಿ. ಜೀವರತ್ನ, ಸಿ.ಎಲ್. ಸುನಂದಮ್ಮ, ಟಿ.ಆರ್.ಅನಸೂಯ ಉಪಸ್ಥಿತರಿದ್ದರು. ಮಮತಾ ಸ್ವಾಗತಿಸಿ, ಉಪಾಧ್ಯಕ್ಷೆ ಎಂ.ಸಿ. ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ: ಸರೋಜ ಟಿ.ಆರ್. ರೇವಣ್ಣ ಸ್ಮಾರಕ ರಾಜ್ಯ ಪ್ರಶಸ್ತಿಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಮಹಿಳಾ ಹೋರಾಟಗಾರ್ತಿ ಓ. ಪುಟ್ಟಲಕ್ಷ್ಮಿ ಅವರಿಗೆ, ಗಂಗಾಧರಯ್ಯ ಗಂಗಮಾಳಮ್ಮ ಸ್ಮಾರಕ ಮಹಿಳಾ ಚೇತನ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ್ತಿ ಚೇಳೂರಿನ ತಮಟೆ ನರಸಮ್ಮ ಅವರಿಗೆ, ಚೆನ್ನಮ್ಮ ಚನ್ನರಾಯಪ್ಪ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಚಿ.ನಾ. ಹಳ್ಳಿ ತಾಲೂಕು ಗಾಣದಾಳು ಗ್ರಾಮದ ನಾಟಿವೈದ್ಯೆ ಖೈರೂನ್ಬಿ ಅವರಿಗೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement