ಯಾರ್ಯಾರಿಗೆ ಒಲಿಯಲಿದೆ ಪುರಪಿತೃ ಪಟ್ಟ?
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾ.11 ಕಳೆದ ಎರಡು ವಾರಗಳಿಂದ ಸ್ಥಳೀಯ ಸಂಸ್ಥೆ ಚುನಾವಣೆ ನೆಪದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದಿದ್ದ ವಿವಿಧ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಕುತೂಹಲಕ್ಕೆ ಬ್ರೇಕ್ ಬೀಳಲು ಕ್ಷಣಗಣನೆ ಆರಂಭವಾಗಿದೆ.
3 ನಗರಸಭೆ: ತುಮಕೂರು ಜಿಲ್ಲೆಯ 3 ನಗರಸಭೆ, 4 ಪುರಸಭೆ ಹಾಗೂ 3 ಪ.ಪಂ. ಫಲಿತಾಂಶ ಹೊರಬೀಳಲಿದೆ.
ಕೂಗಳತೆ ದೂರದಲ್ಲಿರುವ ವಿಧಾನಸಭಾ ಚುನಾವಣೆ ಎಂಬ ಫೈನಲ್ ಪಂದ್ಯಕ್ಕೆ ಸ್ಥಳೀಯ ಸಂಸ್ಥೆ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದು ನಾಳೆ ಬೆಳಗ್ಗೆ 10 ಗಂಟೆಯೊಳಗೆ ಬಹುತೇಕ ಎಲ್ಲಾ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.
1201 ಅಭ್ಯರ್ಥಿಗಳು: 3 ನಗರಸಭೆ, 4 ಪುರಸಭೆ ಹಾಗೂ 3 ಪ.ಪಂ. ನಿಂದ ಒಟ್ಟು 1201 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ತುಮಕೂರು ನಗರಸಭೆಯ ಎಲ್ಲಾ 35 ವಾರ್ಡ್ನಿಂದ ಭರ್ತಿ 240 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಕಾಂಗ್ರೆಸ್ನಿಂದ 35, ಬಿಜೆಪಿಯಿಂದ 31, ಜೆಡಿಎಸ್ನಿಂದ 34, ಕೆಜೆಪಿಯಿಂದ 32, ಬಿಎಸ್ಆರ್ ನಿಂದ 15, ಜೆಡಿಯು 7 ಹಾಗೂ 79 ಮಂದಿ ಪಕ್ಷೇತರರು ಅಖಾಡದಲ್ಲಿದ್ದಾರೆ.
ಏನಾಗುತ್ತೆ ಕೆಜೆಪಿ: ಈ ಬಾರಿ ಕೆಜೆಪಿ ಪಕ್ಷ ಸ್ವತಂತ್ರವಾಗಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಸ್ಪರ್ಧೆ ಬಿರುಸಿನಿಂದ ಕೂಡಿದೆ. ತುಮಕೂರಿನಲ್ಲಿ ಕಳೆದ ನಗರಸಭೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಈ ಬಾರಿಯಾದರೂ ಒಂದು ಪಕ್ಷಕ್ಕೆ ಮತದಾರ ಮತ ನೀಡುತ್ತಾನೋ ಅಥವಾ ಅತಂತ್ರ ನಗರಸಭೆ ನಿರ್ಮಾಣ ಮಾಡುತ್ತಾನೋ ಎಂಬುದಕ್ಕೆ ನಾಳೆಯ 10 ಗಂಟೆಯವರೆಗೆ ಕಾಯಲೇಬೇಕು.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ ಈಗಾಗಲೇ ವಿಧಾನಸಭಾ ಚುನಾವಣೆಗಳಿಗೂ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಆ ಪಕ್ಷಕ್ಕೆ ಪೂರಕ ಪರೀಕ್ಷೆ ಇದ್ದಂತೆ. ಹೀಗಾಗಿ ಈ ಬಾರಿ ನಗರಸಭೆಯಲ್ಲಿ ತನ್ನ ಪಾರುಪತ್ಯ ಮೆರೆಯುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ ಯಂತ್ರ ಭದ್ರ: ತುಮಕೂರಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತಯಂತ್ರಗಳನ್ನು ಭದ್ರ ಪಡಿಸಲಾಗಿದೆ. ಸೋಮವಾರ ಬೆಳಗ್ಗೆ ಮತಎಣಿಕೆ ಆರಂಭವಾಗಿದ್ದು 10 ಗಂಟೆಯೊಳಗೆ ಹೆಚ್ಚು ಕಡಿಮೆ ಎಲ್ಲಾ ಫಲಿತಾಂಶಗಳು ಹೊರ ಬೀಳುವ ಸಾಧ್ಯತೆ ಇದೆ.
ಹೊಸ ಪ್ರಯೋಗ: ಈ ಬಾರಿ ಎಲ್ಲಾ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೊಸ ಪ್ರಯೋಗ ಮಾಡಿತ್ತು. ಪಕ್ಷದ ನಿಷ್ಠೆ ಬದಲಾಯಿಸಿದವರಿಗೆ, ಕಳೆದ 5 ವರ್ಷದ ಅವಧಿಯಲ್ಲಿ ಪದೇ ಪದೇ ಒಂದಲ್ಲಾ ಒಂದು ಕಿರಿಕಿರಿ ಮಾಡಿ ಪಕ್ಷಕ್ಕೆ ಮುಜುಗರ ಹುಟ್ಟಿಸುತ್ತಿದ್ದವರಿಗೆ, ಸುಳ್ಳು ಸುಳ್ಳೆ ಬೇರೆ ಪಕ್ಷಕ್ಕೆ ಹೋಗುತ್ತೇನೆಂದು ಬೆದರಿಸುತ್ತಿದ್ದವರಿಗೆ ಕಟ್ಟು ನಿಟ್ಟಾಗಿ ಟಿಕೆಟ್ ನಿರಾಕರಿಸಿದೆ. ಇವರಲ್ಲಿ ಕೆಲವರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ ಮತ್ತೆ ಕೆಲವರು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದರು. ಮತ್ತೆ ಕೆಲವರು ಚುನಾವಣೆಯಿಂದ ನಿವೃತ್ತಿಯಾಗಿದ್ದರು.
ಹೀಗಾಗಿ ಈ ಬಾರಿಯೂ ಬಹುತೇಕ ನಗರಸಭೆಗೆ ಹೊಸ ಮುಖಗಳ ದರ್ಶನವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ಕಳೆದ ಎರಡು ವಾರಗಳಿಂದ ಕಾವು ಪಡೆದುಕೊಂಡಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಸೋಮವಾರ 10 ಗಂಟೆಯೊಳಗೆ ಫಲಿತಾಂಶ ಹೊರ ಬರುವ ಮೂಲಕ ತಣ್ಣಗಾಗಲಿದೆ. ಇನ್ನೇನಿದ್ದರೂ ವಿಧಾನಸಭೆಗೆ ತಯಾರಿ ಆರಂಭಿಸಬೇಕಾಗಿದೆ.
ಮುಖ್ಯಾಂಶಗಳು...
1. 1201 ಅಭ್ಯರ್ಥಿಗಳ ಹಣೆಬರೆಹ ಇಂದು ನಿರ್ಧಾರ
2. ತುಮಕೂರು ನಗರಸಭೆಗೆ 240 ಹುರಿಯಾಳುಗಳು
3. ಬಿಜೆಪಿಗೆ ಸೆಡ್ಡು ಹೊಡೆಯುತ್ತೋ ಯಡ್ಯೂರಪ್ಪರ ಕೆಜೆಪಿ
4. 10 ಗಂಟೆಗೆಲ್ಲಾ ಹೊರಬೀಳಲಿದೆ ಫಲಿತಾಂಶ
5. ಶಾಂತಿಯುತ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು