ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗೆದ್ದ ನಗರಸಭೆ ಮಾಜಿ ಅಧ್ಯಕ್ಷರು

Rashmi Kasaragodu
Updated On : 11 Mar 2013, 11:21 am

ತುಮಕೂರು: ಈ ಬಾರಿಯ ತುಮಕೂರು ನಗರಸಭೆಯಲ್ಲಿ ಕಳೆದ ಬಾರಿ ಇಬ್ಬರು ಮಾಜಿ ಅಧ್ಯಕ್ಷರು ಜಯ ದಾಖಲಿಸಿದ್ದಾರೆ. 14ನೇ ವಾರ್ಡ್‌ನಿಂದ ನಗರಸಭೆ ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ಎಂ.ಪಿ. ಮಹೇಶ್ ಅವರು ಕೆಜೆಪಿಯ ಸಯದ್ ರೆಹಮತ್ ಉಲ್ಲಾ ಅವರನ್ನು 1156 ಮತಗಳ ಅಂತರದಿಂದ ಸೋಲಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ 17ನೇ ವಾರ್ಡ್‌ನಿಂದ ನಗರಸಭೆ ಮಾಜಿ ಅಧ್ಯಕ್ಷೆಯಾಗಿದ್ದ ಗೀತಾ ರುದ್ರೇಶ್ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಅನಿತಾ ವಿರುದ್ಧ 1156 ಮತಗಳ ದೊಡ್ಡ ಅಂತರದಿಂದ ಜಯಗಳಿಸಿದ್ದಾರೆ.
ಕೆಜೆಪಿಗೆ ಖುಷಿ
ತುಮಕೂರು ನಗರಸಭೆಯಲ್ಲಿ 5 ಹಾಗೂ ಜಿಲ್ಲೆಯಲ್ಲಿ 20 ವಾರ್ಡ್‌ಗಳಲ್ಲಿ ಕೆಜೆಪಿ ಗೆದ್ದಿರುವುದು ಸಮಾಧಾನಕರ ಹಾಗೂ ಖುಷಿಯ ವಿಚಾರ. ಬಿಜೆಪಿಗಿಂತ ಹೆಚ್ಚು ಮತಗಳನ್ನು ನಾವು ಪಡೆದಿದ್ದೇವೆ. ಯಡಿಯೂರಪ್ಪನವರ ವರ್ಚಸ್ಸು ಹಾಗೂ ಕಾರ್ಯಕರ್ತರ ಶ್ರಮದಿಂದ ಈ ಗೆಲುವು ಸಾಧ್ಯವಾಯಿತು.
- ಹೆಬ್ಬಾಕ ರವಿ,
ಕೆಜೆಪಿ ಜಿಲ್ಲಾಧ್ಯಕ್ಷ.
ಜೆಡಿಎಸ್‌ಗೆ ಆಶೀರ್ವಾದ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರ ಜಾತ್ಯತೀತ ಜನತಾದಳಕ್ಕೆ ಆಶೀರ್ವದಿಸಿರುವುದು ಖುಷಿಯ ವಿಚಾರ. 17 ವಾರ್ಡ್‌ಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದೆವು. 13 ರಲ್ಲಿ ಗೆದ್ದಿದ್ದೇವೆ. ಕೆಲ ವಾರ್ಡ್‌ಗಳಲ್ಲಿ ಬೆರಳೆಣಿಕೆ ಮತಗಳಲ್ಲಿ ಸೋತಿದ್ದೇವೆ. ನಮ್ಮ ನಾಯಕತ್ವಕ್ಕೆ ವಿಶ್ವಾಸ ತೋರಿಸಿದ್ದಾರೆ.
- ಎಂ.ಆರ್. ಹುಲಿನಾಯ್ಕರ್
ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಸೋಲು ಒಪ್ಪಿಕೊಳ್ಳುವೆ
ತುಮಕೂರು:  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಕನ್ನಡಪ್ರಭ ದೊಂದಿಗೆ ಮಾತನಾಡಿ ರಾಜ್ಯದಲ್ಲೂ ಬಿಜೆಪಿಗೆ ಹಿನ್ನೆಡೆಯಾಗಿದೆ. ಹಾಗೆಯೇ ಜಿಲ್ಲೆಯಲ್ಲೂ ಹಿನ್ನೆಡೆಯಾಗಿದೆ. ಮತದಾರ ಪ್ರಭುಗಳ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದರು.
- ಸೊಗಡು ಶಿವಣ್ಣ,
ಜಿಲ್ಲಾ ಉಸ್ತುವಾರಿ ಸಚಿವ
ಜನತೆಗೆ ಕೃತಜ್ಞತೆ
ಪಾವಗಡ: ಪುರಸಭೆ ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪನ್ನು ಸ್ವಾಗತಿಸಿರುವ ತಾ.ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲಾಗಿದ್ದು ನಿರೀಕ್ಷೆಯಂತೆ ಪುರಸಭಾ ಚುನಾವಣಾ ಫಲಿತಾಂಶ ಬಾರದಿದ್ದರೂ ಕಡಿಮೆ ಅಂತರದಲ್ಲಿ ಕೆಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಪರಾಜಯಗೊಂಡಿದ್ದಾರೆ. 23 ಸ್ಥಾನಗಳ ಪೈಕಿ 10ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು ಕೇವಲ  2ಸ್ಥಾನಗಳು ಬಂದಿದ್ದರೆ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬರುತ್ತಿತ್ತು. ಆದರೂ ಪಕ್ಷೇತರವಾಗಿ ಗೆದ್ದ ಅಭ್ಯರ್ಥಿಗಳ ಬೆಂಬಲದಿಂದ ಪುರಸಭೆ ಕಾಂಗ್ರೆಸ್ ಆಡಳಿತಕ್ಕೆ ತರುವ ಭರವಸೆ ವ್ಯಕ್ತಪಡಿಸಿದರು.
ಜೆಡಿಎಸ್ ಪಾರುಪತ್ಯ
ತುಮಕೂರು: ಜಿಲ್ಲೆಯ 3 ನಗರಸಭೆ, 4 ಪುರಸಭೆ ಹಾಗೂ 3 ಪಟ್ಟಣ ಪಂಚಾಯತ್‌ನ 234 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಸೀಟು ಪಡೆದ ಜೆಡಿಎಸ್ ಮೊದಲ ಸ್ಥಾನವಾಗಿ ಹೊರಹೊಮ್ಮಿದೆ. ಎರಡನೇ ಸ್ಥಾನ ಕಾಂಗ್ರೆಸ್ ಪಡೆದರೆ 3 ನೇ ಸ್ಥಾನವನ್ನು ಕೆಜೆಪಿ ಪಡೆದುಕೊಂಡಿದೆ. ಕಡೆಯ ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟುಕೊಂಡಿದೆ. ಜಿಲ್ಲೆಯ 234 ವಾರ್ಡ್‌ಗಳಲ್ಲಿ ಜೆಡಿಎಸ್ 93 ರಲ್ಲಿ, ಕಾಂಗ್ರೆಸ್ 77 ರಲ್ಲಿ, ಕೆಜೆಪಿ 20 ರಲ್ಲಿ ಹಾಗೂ ಬಿಜೆಪಿ 17 ರಲ್ಲಿ ಜಯ ದಾಖಲಿಸಿದೆ. 26 ಮಂದಿ ಪಕ್ಷೇತರರು ಜಯ ದಾಖಲಿಸಿದ್ದಾರೆ.
ಜಿಲ್ಲಾಧಿಕಾರಿ ಕೃತಜ್ಞತೆ
ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅಧಿಕಾರಿ ವರ್ಗದವರಿಗೆ, ಎಲ್ಲಾ ರೀತಿಯಲ್ಲೂ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿದ ಅಭ್ಯರ್ಥಿಗಳು, ರಾಜಕೀಯ ನೇತಾರರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement