ಸುದ್ದಿ ಸಂಕ್ಷೇಪ
'ಎಚ್ಡಿಕೆ ಸಂಧಾನ ಒಪ್ಪದ ಕೃಷ್ಣಪ್ಪ'
ತುರುವೇಕೆರೆ: ತಾಲೂಕಿನ ಜೆಡಿಎಸ್ ಜನಪ್ರತಿನಿಧಿಗಳು ಕಾದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಡೆಸಲು ಮುಂದಾಗಿದ್ದ ರಾಜಿ ಸಂಧಾನ ಶಾಸಕರ ನಿರಾಸಕ್ತಿಯಿಂದಾಗಿ ಮುರಿದು ಬಿದ್ದಿದೆ.
ಶಾಸಕ ಎಂ.ಟಿ.ಕೃಷ್ಣಪ್ಪ ಬೆಂಬಲಿಗರು ಹಾಗೂ ತಾಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಿ.ಕೆ.ಸೋಮಣ್ಣ ಬೆಂಬಲಿಗರ ನಡುವೆ ಕಳೆದ ಐದಾರು ದಿನಗಳ ಹಿಂದೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತಿಘಟ್ಟ ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ನಾಟಕದ ವೇಳೆ ಹೊಡೆದಾಟವೇ ಆಗಿತ್ತು.
ಆಗ ಸೋಮಣ್ಣ ನವರಿಗೆ ಹಾಗೂ ಅವರ ಬೆಂಬಲಿಗರ ಮೇಲೆ ಹಲವಾರು ಮಂದಿ ಹಲ್ಲೆ ಮಾಡಿದ್ದರು. ಶಾಸಕರ ಚಿತಾವಣೆಯಿಂದಲೇ ತಮ್ಮ ಮೇಲೆ ಹಲ್ಲೆ ಮಾಡಲಾಯಿತು ಎಂದು ಆರೋಪಿಸಿಸೋಮಣ್ಣ ಬೆಂಬಲಿಗರು ಮರುದಿನ ಸೋಮಣ್ಣನ ಸ್ವಗ್ರಾಮ ಬ್ಯಾಲಹಳ್ಳಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಮೇಲೆ ಬಿ.ಕೆ.ಸೋಮಣ್ಣ ಬೆಂಬಲಿಗರು ಹಲ್ಲೆ ಮಾಡಿ ಗೃಹಬಂಧನದಲ್ಲಿ ಇಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಟಿ.ಕೃಷ್ಣಪ್ಪಬಿ.ಕೆ.ಸೋಮಣ್ಣ ಹಾಗೂ ಇತರೆ 4 ಮಂದಿ ವಿರುದ್ಧ ಕೊಲೆ ಪ್ರಯತ್ನ ಹಾಗೂ ದರೋಡೆ ಪ್ರಕರಣ ದಾಖಲಿಸಿದ್ದರು. ಸ್ಥಳೀಯ ಪೊಲೀಸರು ಬಿ.ಕೆ.ಸೋಮಣ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಇಬ್ಬರ ಮಧ್ಯೆ ಪ್ರವೇಶಿಸಿ ರಾಜೀ ಸಂಧಾನ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ, ಶಾಸಕ ಎಂ.ಟಿ.ಕೃಷ್ಣಪ್ಪ, ಬಿ.ಕೆ.ಸೋಮಣ್ಣ ಹಾಗೂ ಇತರೆ ಅವರ ಬೆಂಬಲಿಗರು ತಮಗೆ ನೀಡಿದ ಮಾನಸಿಕ ಹಾಗೂ ದೈಹಿಕ ತೊಂದರೆಯನ್ನು ಹೆಚ್ಡಿಕೆ ಗೆ ಮನದಟ್ಟು ಮಾಡಿಕೊಟ್ಟರೆಂದು ಹೇಳಲಾಗಿದೆ. ಸೋಮಣ್ಣ ವರ್ತನೆ ಹೇಯ ಕೃತ್ಯವಾಗಿದ್ದು, ರಾಜಿಯ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಹೆಚ್ಡಿಕೆ ಸೂಚನೆಗೆ ನಿರಾಸಕ್ತಿ ತೋರಿದರು ಎಂದು ಹೇಳಲಾಗಿದೆ. ಈಗಾಗಲೇ ಬಿ.ಕೆ. ಸೋಮಣ್ಣ ಹಾಗೂ ಇತರೆ ಇಬ್ಬರು ನ್ಯಾಯಾಂಗ ಬಂಧನಕ್ಕೆ ತೆರಳಿ 6 ದಿನಗಳಾಗಿವೆ. ಇನ್ನೂ ಜಾಮೀನು ಸಿಕ್ಕಿಲ್ಲ. ಸೋಮಣ್ಣ ಮಗನ ಸಹಿತ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.
ಹಾವು ಕಡಿದು ಇಬ್ಬರು ಮಕ್ಕಳ ಸಾವು
ಹಲಗೂರು: ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಶಿವಲಿಂಗೇಗೌಡರ ಜಮೀನಿನ ಹತ್ತಿರ ಟೆಂಟ್ನಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಇಬ್ಬರು ಮಕ್ಕಳಿಗೆ ಹಾವು ಕಡಿದು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಸುಪ್ರಿತಾ ಬಾಯ್(1), ರತ್ನಬಾಯಿ(5) ಎಂದು ಗುರುತಿಸಲಾಗಿದೆ.
ಬಿಸಿಯೂಟ ಕಾರ್ಯಕರ್ತೆಯರ ಕಡೆಗಣನೆ: ಮಾಲಿನಿ ಆಕ್ರೋಶ
ತಿಪಟೂರು: ಅಕ್ಷರ ದಾಸೋಹ ನೌಕರರು ಕಳೆದ 11 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಕೆಲಸಕ್ಕೆ ತಕ್ಕ ಸಂಬಳ ನೀಡದೆ ಸರ್ಕಾರವು ಬಿಸಿಯೂಟ ಕಾರ್ಯಕರ್ತೆಯರನ್ನು ಶೋಷಣೆ ಮಾಡುತ್ತಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಆರ್ಯಬಾಲಿಕಾ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ತಾಲೂ ಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ನಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಸಿಐಟಿಯು ಅಧ್ಯಕ್ಷೆ ಅನಸೂಯ ಮಾತನಾಡಿದರು. ಹೊಸ ಸಮಿತಿ ಅಸ್ತಿತ್ವಕ್ಕೆ: ಇದೆ ವೇಳೆ ಹೊಸ ಸಮಿತಿ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ನಾಗರತ್ಮಮ್ಮ, ಕಾರ್ಯದರ್ಶಿ ಬಿ.ಎನ್.ರಾಧಮ್ಮ, ಖಜಾಂಚಿ ಮಂಗಳಾ, ಸಹ ಕಾರ್ಯದರ್ಶಿ ಗಾಯತ್ರಮ್ಮ, ಕಲಾವತಿ, ಲತಾ, ಮಂಜಮ್ಮ, ಉಪಾಧ್ಯಕ್ಷರಾಗಿ ಎ.ಎನ್.ಲಕ್ಷ್ಮಿದೇವಿ, ಅನಸೂಯ, ಮಂಜುಳಾ, ಗೌರಮ್ಮ, ಸದಸ್ಯರಾಗಿ ಶಾರದಮ್ಮ, ಕೆ.ಎಸ್.ಸುಮಿತ್ರ, ಎ.ಎಸ್.ಸುಶೀಲಾ, ಶಿವಮ್ಮ,ಎಂ.ಎನ್.ಮಂಜುಳಾ, ಕಾಂತಮಣಿ, ಟಿ.ಎನ್.ಲಕ್ಷ್ಮಿ, ಶೈಲಜಾ, ಭಾಗ್ಯಮ್ಮ ಇವರನ್ನು ಒಟ್ಟಾರೆಯಾಗಿ ಆಯ್ಕೆ ಮಾಡಲಾಯಿತು.
ಕಾಂಗ್ರೆಸ್ ಪ. ವಿಭಾಗ ಪೂರ್ವಭಾವಿ ಸಭೆ
ಕ.ಪ್ರ. ವಾರ್ತೆ ್ಣ ಪಾವಗಡ ್ಣ ಮಾ.12
ಅಭಿವೃದ್ಧಿ ಹಿನ್ನೆಲೆಯಲ್ಲಿ ಸಂಘಟಿತರಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ಮನವಿ ಮಾಡಿದ್ದಾರೆ.
ಎಸ್ಟಿ ಜನಾಂಗವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದ ಜಾರಕಿಹೊಳಿ ಮಂಗಳವಾರ ಪಟ್ಟಣಕ್ಕೆ ಆಗಮಿಸಿ, ಇಲ್ಲಿನ ಸಾಯಿರಾಂ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಎಸ್.ಟಿ ಜನಾಂಗದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎಸ್.ಟಿ ಜನಾಂಗದ ರಾಜ್ಯಾಧ್ಯಕ್ಷ ಈಶ್ವರ್ ಮಾತನಾಡಿ, ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ನಾಯಕ ಜನಾಂಗವಿದ್ದು, ಅಭಿವೃದ್ದಿ ಹಿನ್ನೆಲೆಯಲ್ಲಿ ನಾಯಕ ಸಮಾಜ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಶಾಸಕ ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷ ಬಸವರಾಜ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುದೇಶ್ಬಾಬು, ಎಚ್.ವಿ.ವೆಂಕಟೇಶ್, ಪುರಸಭೆ ಮಾಜಿ ಸದಸ್ಯ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಅಕ್ರಮ ಮರಳು ಸಮೇತ ಟ್ರ್ಯಾಕ್ಟರ್ ವಶ
ಕನ್ನಡಪ್ರಭವಾರ್ತೆ ್ಣ ಸಕಲೇಶಪುರ ್ಣ ಮಾ.12
ಅಕ್ರಮವಾಗಿ ತುಂಬುತ್ತಿದ್ದ ಮರಳು ಸಮೇತ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿ ಕೊಂಡಿರುವ ಘಟನೆ ತಾಲೂಕಿನ ಯಸಳೂರು ಹೋಬಳಿಯ ಫಾಲಹಳ್ಳಿ ಹತ್ತಿರದ ಸೇತುವೆ ಹತ್ತಿರ ಭಾನುವಾರ ನಡೆದಿದೆ.
ಹೊಳೆಯಲ್ಲಿ ಅಕ್ರಮವಾಗಿ ಮರಳು ಅಕ್ರಮವಾಗಿ ತುಂಬುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರನ್ನು ಕಂಡು ಮರಳು ತುಂಬುತ್ತಿದ್ದ ಅಶೋಕ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದಾನೆ. ಮರಳು ತುಂಬಿದ ಟ್ರ್ಯಾಕ್ಟರನ್ನು ವಶಪಡಿಸಿಕೊಂಡಿರುವ ಯಸಳೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.