ನಿರ್ಭಿಡೆ ಅಭಿಪ್ರಾಯ ಮಂಡಿಸಿ: ಅಚ್ಯುತನ್
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.13
ನಿಮ್ಮ ಅಭಿಪ್ರಾಯಗಳನ್ನು ನಿರ್ಬಿಢೆಯಿಂದ ಮಂಡಿಸಿ. ಸಮಾಜದೊಂದಿಗೆ ದೃಢತೆ ಹಾಗೂ ನಿರ್ಭಿಡೆಯಿಂದ ವ್ಯವಹರಿಸುವುದು ಪತ್ರಕರ್ತನ ಪ್ರಥಮ ಜವಾಬ್ದಾರಿ ಎಂದು ದೂರದರ್ಶನದ ನಿವೃತ್ತ ನಿರ್ದೇಶಕ ಕೆ. ಎಸ್. ಅಚ್ಯುತನ್ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ಟಿವಿ ಹಾಗೂ ಬಾನುಲಿ ಬರವಣಿಗೆ ಕಾರ್ಯಾಗಾರನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕ್ಯಾಂಪಸ್ ಸುದ್ದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪತ್ರಿಕೋದ್ಯಮಕ್ಕೆ ತುಂಬ ಅನಿವಾರ್ಯವಾಗಿರುವ ನಿರಂತರ ಓದು ಹಾಗೂ ಬರವಣಿಗೆಯನ್ನು ರೂಢಿಸಿಕೊಳ್ಳುವುದರಿಂದ ಮಾಧ್ಯಮ ವಿದ್ಯಾರ್ಥಿಗಳು ತಮ್ಮಲ್ಲಿ ಹೊಸ ಸಂಚಲನವನ್ನು ಕಾಣಬಹುದು ಎಂದರು.
ಟಿವಿಯಿಂದಾಗಿ ಆಧುನಿಕತೆಯ ವಿವಿಧ ಆಯಾಮಗಳ ಪರಿಚಯ ಜನರಿಗೆ ಆಗಿದೆಯೇ ಹೊರತು ರೇಡಿಯೋ ಅನುಪಯುಕ್ತವೆನಿಸಿಲ್ಲ. ಅದರ ಪ್ರಭಾವ ಇಂದು ಜನಸಾಮಾನ್ಯರ ನಡುವೆ ದಟ್ಟವಾಗಿಯೇ ಇದೆ. ಯಾವ ಮಾಧ್ಯಮವೂ ಮೃತ ಮಾಧ್ಯಮವಲ್ಲ ಎಂದರು.
ಅನಿವಾರ್ಯ: ಮಾಧ್ಯಮ ವಿದ್ಯಾರ್ಥಿಗಳು ಭಾಷೆಯ ಬಗ್ಗೆ ಹೆಚ್ಚಿನ ಗಮನ ನೀಡುವುದು ಅನಿವಾರ್ಯ. ಭಾಷೆಯನ್ನು ಗಟ್ಟಿಗೊಳಿಸದೇ ಹೋದರೆ ಯಾವ ಮಾಧ್ಯಮದಲ್ಲಾದರೂ ಒಳ್ಳೆಯ ಛಾಪು ಮೂಡಿಸುವುದು ಕಷ್ಟ. ವಿದ್ಯುನ್ಮಾನ ಮಾಧ್ಯಮದ ಭಾಷೆ ಆಡುಮಾತಿಗೆ ಹತ್ತಿರವಾಗಿರಬೇಕು ಎನ್ನುವುದು ನಿಜ. ಆದರೆ ಅದು ಶಿಷ್ಟಭಾಷೆಯ ಸತ್ವವನ್ನು ಕಳೆದುಕೊಳ್ಳಬಾರದು ಎಂದು ಅಚ್ಯುತನ್ ವಿವರಿಸಿದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸುಚೇತನ ಸ್ವರೂಪ್, ಬರವಣಿಗೆ ಹಾಗೂ ಮಾತುಗಾರಿಕೆ ಎರಡರಲ್ಲೂ ಸಮಾನವಾದ ಪ್ರಭುತ್ವ ಸಾಧಿಸುವ ವ್ಯಕ್ತಿ ನಿಜವಾದ ಪ್ರತಿಭಾವಂತ ಎನಿಸುತ್ತಾನೆ. ಅಂತಹ ವ್ಯಕ್ತಿತ್ವ ರೂಪಿಸಿಕೊಳ್ಳಲು ಪತ್ರಕೋದ್ಯಮದ ಅಧ್ಯಯನ ತುಂಬ ಸಹಕಾರಿ ಎಂದರು.
ಹೊಣೆ ಅರಿಯಬೇಕು: ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಟಿ.ಎನ್. ಹರಿಪ್ರಸಾದ್ ಮಾತನಾಡಿ, ಹೊಣೆಮರೆತ ಮಾಧ್ಯಮಗಳ ಕುರಿತು ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಹೊಸಪೀಳಿಗೆಯ ಯುವಕರು ಹೊಣೆಯರಿತ ಪತ್ರಕರ್ತರಾಗಿ ತಯಾರಾಗಬೇಕು ಎಂದು ಆಶಿಸಿದರು.
ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಪದ್ಮನಾಭ ಕೆ. ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಇ. ನಿರೂಪಿಸಿದರು. ಮನುಪ್ರಿಯ ಆಶಯಗೀತೆ ಹಾಡಿದರು. ಶೈಲಜ ಎಲ್. ಅತಿಥಿಗಳನ್ನು ಪರಿಚಯಿಸಿದರು. ಲೋಕೇಶ್ ಕೆ. ಎನ್. ಸ್ವಾಗತಿಸಿದರು. ನಾಗನಗೌಡ ಎಸ್. ಬಿ. ವಂದಿಸಿದರು.