ಪ್ರಶಸ್ತಿಗಾಗಿ ಅರ್ಜಿ ಸಲ್ಲಿಕೆ ವಿಸ್ತರಣೆ
ತುಮಕೂರು: 14 ರಿಂದ 18 ವರ್ಷ ವಯೋವುತಿಯ ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ.15 ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೆ ಸಲ್ಲಿಸುವ ಅಗತ್ಯ ಇರುವುದಿಲ್ಲ. ಅರ್ಜಿಗಳನ್ನು ವಿಜ್ಞಾನ ಕೇಂದ್ರದಿಂದ ಪಡೆದು ಭರ್ತಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸುವಂತೆ ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ತಿಳಿಸಿದ್ದಾರೆ.
ಮೇಘದೂತ ಕುರಿತ ಉಪನ್ಯಾಸ
ತುಮಕೂರು: ಇಲ್ಲಿನ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕಾಳಿದಾಸನ ಮೇಘದೂತ ಕುರಿತು ವಿಶ್ಲೇಷಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೊ. ಬಸವೇಶ್ ಅವರು ಕಾಳಿದಾಸನ ಈ ಕೃತಿಯನ್ನು ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶೈಲಕುಮಾರಿ ವಹಿಸಿದ್ದರು. ಕೆ.ಬಿ. ಸುರೇಶ್ಬಾಬು ನಿರೂಪಿಸಿದರು. ರವೀಶ್ ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಉಪಸ್ಥಿತರಿದ್ದರು.
17 ರಂದು ಸಾಂಸ್ಕೃತಿಕ ಉತ್ಸವ
ತುಮಕೂರು: ಇಲ್ಲಿನ ಕೀರ್ತನ ರಂಗಬಳಗದ ವತಿಯಿಂದ ಮಾ. 17 ರಂದು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಭಕ್ತಗೀತೆ, ಭಾವಗೀತೆ, ಜನಪದಗೀತೆ, ರಂಗಗೀತೆ, ಕಥಾಕೀರ್ತನ ಹಾಗೂ ಸ್ಥಳದಲ್ಲೇ ಚಿತ್ರ ಬರೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ. ಆಸಕ್ತರು ನರಸಿಂಹದಾಸ್, ಸಂಸ್ಥಾಪಕರು, ರಂಗಬಳಗ, ಮೊ. 9845580963 ಸಂಪರ್ಕಿಸಲು ಕೋರಲಾಗಿದೆ.
ಸಿನಿಮಾ ನಿರ್ಮಾಣ ನಿಷೇಧಿಸಿ
ತುಮಕೂರು: ಉಮೇಶ್ ರೆಡ್ಡಿ ಚಲನಚಿತ್ರ ನಿರ್ಮಾಣ ಹಾಗೂ ಬಿಡುಗಡೆ ನಿಷೇಧಿಸಬೇಕೆಂದು ಕರ್ನಾಟಕ ಪ್ರಜಾಸೇನೆ ಒತ್ತಾಯಿಸಿದೆ. ಇತ್ತೀಚೆಗೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸ್ತ್ರೀಯರು ಹಾಗೂ ಬಾಲಕಿಯರ ಮೇಲೆ ದಿನ ನಿತ್ಯ ಅತ್ಯಾಚಾರಗಳು ನಡೆಯುತ್ತಿವೆ. ಒಂಟಿ ಮಹಿಳೆಯರು ಮನೆಯ ಒಳಗೆ ಹಾಗೂ ಹೊರಗೆ ಇರುವುದು ತುಂಬಾ ಕಷ್ಟವಾಗಿದೆ. ಇಂತಹ ಹೊತ್ತಲ್ಲಿ ಉಮೇಶ್ ರೆಡ್ಡಿಯಂತಹವರ ಕುರಿತು ಚಲನಚಿತ್ರ ನಿರ್ಮಾಣ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಜಾಸೇನೆ ಅಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ ತಿಳಿಸಿದ್ದಾರೆ.
ಇಂದು ನಗರಸಭಾ ಸದಸ್ಯರಿಗೆ ಅಭಿನಂದನೆ
ತುಮಕೂರು: ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ಮಾ. 14 ರಂದು ಬೆಳಗ್ಗೆ 10.30 ಕ್ಕೆ ನಗರಸಭೆಯ ನೂತನ ಸದಸ್ಯರನ್ನು ಗೌರವಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸಮ್ಮುಖದಲ್ಲಿ ಈ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಸಾಗರನಹಳ್ಳಿ ಪ್ರಭು ತಿಳಿಸಿದ್ದಾರೆ.