ವಾಟರ್ಗ್ರಿಡ್ ಕೆನಾಲ್ಗೆ ಸಚಿವ ಸಂಪುಟ ಒಪ್ಪಿಗೆ
ಕನ್ನಡಪ್ರಭ ವಾರ್ತೆ ್ಣ ತುಮಕೂರು ್ಣ ಮಾ.13
ಮಧ್ಯಕರ್ನಾಟಕದ 9 ಜಿಲ್ಲೆಗಳ, 43 ತಾಲೂಕುಗಳ ಕುಡಿಯುವ ನೀರಿನ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ತಮಗೆ ಸಂತಸ ತಂದಿದ್ದು, ಆತಂಕ ದೂರ ಮಾಡಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ರೂಪಿಸಿರುವ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆ, ರಾಜ್ಯ ನೀರಾವರಿ ನಿಗಮ ರೂಪಿಸಿರುವ ಎತ್ತಿನ ಹೊಳೆ ಯೋಜನೆ ಮತ್ತು ಕಾವೇರಿ ನೀರಾವರಿ ನಿಗಮದ ಹೇಮಾವತಿ ಪ್ಲಡ್ ಕೆನಾಲ್ ಸೇರಿದಂತೆ ಈ ಮೂರು ಯೋಜನೆಗಳ ನೀರು ಒಂದೇ ಕಾಲುವೆಯಲ್ಲಿ ಹರಿಯುವಂತಹ ಒಂದೇ ಸಂಯುಕ್ತ ಕಾಲುವೆ (ವಾಟರ್ಗ್ರಿಡ್ ಕೆನಾಲ್) ನಿರ್ಮಿಸಲು ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಈ ಯೋಜನೆ 3 ವರ್ಷಗಳಲ್ಲಿ ನನಸಾಗುವ ಆಶಯವನ್ನು ಜಿಎಸ್ಬಿ ವ್ಯಕ್ತಪಡಿಸಿದರು.
ನೆಮ್ಮದಿಯ ಕ್ಷಣ: 1977 ರಿಂದ ಈ ಈ ಯೋಜನೆ ಜಾರಿಗೆ ನಿರಂತರವಾಗಿ ಒತ್ತಾಯ ನಡೆದೇ ಇತ್ತು. ಈಗ ಯೋಜನೆ ಜಾರಿಗೆ ಒಪ್ಪಿಗೆ ನೀಡಿರುವುದು ತಮ್ಮ ಜೀವನದ ನೆಮ್ಮದಿಯ ಕ್ಷಣವಾಗಿದೆ.
ಆಡಳಿತಾತ್ಮಕ ಅನುಮೋದನೆ ಜತೆಗೆ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಲು ಯೋಜನೆಯ ರೂವಾರಿ ಜಿ.ಎಸ್. ಪರಮಶಿವಯ್ಯನವರ ನೇತೃತ್ವದ ತಾಂತ್ರಿಕ ಸಮಿತಿಗೆ ವಹಿಸಲು ಸಚಿವ ಸಂಪುಟ ಅನುಮೋದನೆ ನೀಡಿರುವುದು ಅಭಿನಂದನೀಯ ಎಂದರು. ಈ ಹಿಂದಿನಿಂದಲೂ ತಾಳಕೆರೆ ಸುಬ್ರಹ್ಮಣ್ಯ, ಹುಚ್ಚಮಾಸ್ತಿಗೌಡ, ಭೈರಪ್ಪನಂತವರು ಈ ಯೋಜನೆ ಜಾರಿಗೆ ಒತ್ತಾಯಿಸುತ್ತಲೇ ಬಂದಿದ್ದರು ಎಂದು ಇತಿಹಾಸವನ್ನು ಮೆಲುಕು ಹಾಕಿದರು.
64 ಸಾವಿರ ಕೋಟಿ ವೆಚ್ಚ: ಈ ವಾಟರ್ಗ್ರಿಡ್ ಕೆನಾಲ್ ಯೋಜನೆಗೆ ಅಂದಾಜು 64 ಸಾವಿರ ಕೋಟಿ ವೆಚ್ಚವಾಗಲಿದೆ. 2013 -14 ನೇ ಸಾಲಿನ ಮುಂಗಡ ಪತ್ರದಲ್ಲಿ ಎತ್ತಿನ ಹೊಳೆ ಯೋಜನೆಗೆ 850 ಕೋಟಿ ರು. ಕೆರೆಗಳಿಗೆ ನೀರುಣಿಸುವ ಯೋಜನೆಗೆ 250 ಕೋಟಿ ರು. ವಾಟರ್ಗ್ರಿಡ್ ಕೆನಾಲ್ಗೆ ಬಾಂಡ್ಗಳ ಮೂಲಕ 1000 ಕೋಟಿ ಹಾಗೂ 2012-13 ನೇ ಸಾಲಿನಲ್ಲಿ ನಿಗದಿಪಡಿಸಲಾಗಿದ್ದ 400 ಕೋಟಿ ರು. ಸೇರಿದಂತೆ ಸುಮಾರು 2450 ಕೋಟಿ ರು. ಕಾಯ್ದಿರಿಸಿ ಸಚಿವ ಸಂಪುಟದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ ಇತಿಹಾಸ ನಿರ್ಮಿಸಲಾಗಿದೆ ಎಂದು ಜಿಎಸ್ಬಿ ತಿಳಿಸಿದರು.
ಅಭಿನಂದನೆ: ಈ ಯೋಜನೆ ಜಾರಿಗೆ ಸಹಕರಿಸಿದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ ಸದಾನಂದಗೌಡ ಹಾಗೂ ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಯೋಜನೆ ಸಮೀಕ್ಷೆಗೆ ಚಾಲನೆ ನೀಡಿದ ಮಾಜಿ ಜಲ ಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್, ಯೋಜನೆಗೆ ಸಹಕರಿಸಿದ ಹಾಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ತಾಂತ್ರಿಕ ವರದಿ ಸಿದ್ಧಪಡಿಸಿದ ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಎಂಜಿನಿಯರ್ಗಳು, ರಾಜಕೀಯ ವೈಮನಸ್ಯ ಮರೆತು ಬೆಂಬಲಿಸಿದ ವಿರೋಧ ಪಕ್ಷಗಳ ನಾಯಕರು, ಮಾಜಿ ಪ್ರಧಾನ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಯೋಜನೆ ಜಾರಿಗೆ ಬೆಂಬಲಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ನೊಣವಿನಕೆರೆ ಮಠದ ಶ್ರೀಗಳ ಪಾತ್ರವನ್ನು ಮಧ್ಯ ಕರ್ನಾಟಕದ ಜನತೆ ಎಂದಿಗೂ ಮರೆಯುವಂತಿಲ್ಲ ಎಂದು ಜಿಎಸ್ಬಿ ತಿಳಿಸಿದರು.
ಡಿಪಿಆರ್ ಕೊನೆ ಹಂತದಲ್ಲಿ: ಈ ವಾಟರ್ಗ್ರಿಡ್ ಕೆನಾಲ್ ಯೋಜನೆಯ ಡಿಪಿಆರ್ ವರದಿಗೆ 11 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ 6 ತಿಂಗಳು ಕಳೆದಿದ್ದು 5 ತಿಂಗಳಲ್ಲಿ ಅಂತಿಮ ವರದಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ತಿಳಿಸಿದರು.
ತುಮಕೂರಿನಲ್ಲಿ ಕಚೇರಿಗೆ ಸಲಹೆ: ಈ ವಾಟರ್ಗ್ರಿಡ್ ಕೆನಾಲ್ ಯೋಜನೆ ಕಚೇರಿಯನ್ನು ತುಮಕೂರಿನಲ್ಲೇ ಸ್ಥಾಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಸಂಸದ ಜಿ.ಎಸ್. ಬಸವರಾಜು ಈ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಕೆಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಜಿಪಂ ಸದಸ್ಯ ಹೆಬ್ಬಾಕ ರವಿಶಂಕರ್, ಕೊಪ್ಪಲ್ ನಾಗರಾಜ್, ವಾಲೆ ಚಂದ್ರಯ್ಯ, ಕೆಜೆಪಿ ಜಿಲ್ಲಾ ವಕ್ತಾರ ವಿರೂಪಾಕ್ಷ ಇತರರು ಇದ್ದರು.
ಜಾಗೃತಿ ಸಮಾವೇಶ ತುಮಕೂರಿನಲ್ಲಿ
ಪ್ರಸ್ತುತ ವಾಟರ್ಗ್ರಿಡ್ ಕೆನಾಲ್ ಯೋಜನೆಯ ಒಂದು ಭಾಗವೇ ಆಗಿರುವ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದು, ತುಮಕೂರಿನಲ್ಲಿ ಮುಖ್ಯ ಎಂಜಿನಿಯರ್ ಕಚೇರಿ ಉದ್ಘಾಟನೆ ಹಾಗೂ ವಾಟರ್ಗ್ರಿಡ್ ಕೆನಾಲ್ ಬಗ್ಗೆ ಬೃಹತ್ ಜಾಗೃತಿ ಸಮಾವೇಶವನ್ನು ತುಮಕೂರಿನಲ್ಲಿ ನಡೆಸುವಂತೆ ಸರ್ಕಾರವನ್ನು ಕೋರಿರುವುದಾಗಿ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.