ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಸಬಾ ಹೋಬಳಿ ಕಲ್ಲೇನಹಳ್ಳಿಯಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದ್ದು, ಪರಿಹಾರಕ್ಕಾಗಿ ಅಂತರ್ಜಲ ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಲಾಯಿತು.
ಮಾ.14ರಂದು ತಾಪಂ ಅಧ್ಯಕ್ಷರಾದ ಎಂ.ಎಂ.ಜಗದೀಶ್ ತಮ್ಮ ಜೊತೆಯಲ್ಲಿ ಅಂತರ್ಜಲ ತಜ್ಞರಾದ ಟಿ.ಎಲ್.ಚಂದ್ರಶೇಖರ್ ಅವರನ್ನು ಕರೆದೊಯ್ದು ಭೌತಿಕವಾಗಿ ಭೂಮಿಯಲ್ಲಿರುವ ಅಂತರ್ಜಲ ಮೂಲವನ್ನು ಪರಿಶೀಲಿಸಿ ನೀರಿನ ಲಭ್ಯತೆ ಬಿಂಧುವನ್ನು ಗುರುತಿಸಿದರು. ನೀರಿಗೆ ಬಹಳ ಹಾಹಾಕಾರವಿರುವುದರಿಂದ ತಾತ್ಕಾಲಿಕವಾಗಿ ಗ್ರಾಮಪಂಚಾಯ್ತಿಯವರು ಟ್ಯಾಂಕರ್ಗಳಲ್ಲಿ ನೀರನ್ನೊದಗಿಸುತ್ತಿದ್ದಾರೆ. ಆದರೆ ಅವರು ಸರಬರಾಜು ಮಾಡುವ ನೀರು ಜನರಿಗೆ ಸಾಕಾಗುತ್ತಿಲ್ಲ. ಆದ್ದರಿಂದ ಆದಷ್ಟು ತ್ವರಿತವಾಗಿ ಕೊಳವೆ ಬಾವಿ ಕೊರೆಸುವುದಾಗಿ ತಾಪಂ ಅಧ್ಯಕ್ಷರು ಜನರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ದೊರೆಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಇದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವ್ನನುಂಟು ಮಾಡುತ್ತಿದೆ. ಆದ್ದರಿಂದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿ ಎಂದು ಒತ್ತಾಯಿಸಿದರು.