ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪತ್ರಿಕೆಗಳು ಸಮಾಜಕ್ಕೆ ದಾರಿದೀಪವಾಗಲಿ

Rashmi Kasaragodu
Updated On : 15 Mar 2013, 12:41 pm

ತಿಪಟೂರು.ಮಾ.14 ರಾಜಕಾರಣ, ಆಡಳಿತ, ಸಮಾಜ ಸೇರಿದಂತೆ ಹತ್ತು ಹಲವು ರಂಗಗಳಲ್ಲಿ ನಿತ್ಯವೂ ನಡೆಯುವ ಆಗುಹೋಗುಗಳ ವಿಮರ್ಶೆ, ನ್ಯೂನತೆಗಳು, ಅನಾಚಾರ, ಅಕ್ರಮ, ಭ್ರಷ್ಟಾಚಾರಗಳ ವಿರುದ್ಧ ಸುದ್ದಿ ಪ್ರಕಟಿಸಿ ಬಯಲಿಗೆಳೆಯುವ ಮೂಲಕ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ಪತ್ರಿಕೆಗಳು ಮಾಡುತ್ತಿವೆ ಎಂದು  ವಿಶ್ಲೇಷಕ ಜಿ.ಎನ್. ಮೋಹನ್ ಅಭಿಪ್ರಾಯಪಟ್ಟರು.
 ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾಧ್ಯಮ ಕುರಿತು ಮಾತನಾಡಿದ ಅವರು ಪತ್ರಿಕೆಗಳು ಜಾಹೀರಾತುಗಳನ್ನು ಹೆಚ್ಚಾಗಿ ಪ್ರಕಟಿಸುವ ಮೂಲಕ ಉದ್ಯಮಗಳಾಗಿ ಬೆಳೆಯುತ್ತಿವೆ. ಮಾಧ್ಯಮಗಳು ಸಮಾಜಕ್ಕೆ ಮಾರಕವಾಗದೆ ಅನಾಚಾರಕ್ಕೆ ಇಳಿಯದೆ ಸಮಾಜದ ಸರ್ವಾಂಗೀಣ ಪ್ರಗತಿಯತ್ತ ಚಿಂತಿಸಬೇಕು. ಆರೋಗ್ಯಕರ ಮತ್ತು ವೈಜ್ಞಾನಿಕ ಹಾಗೂ ಸತ್ಯ ಸುದ್ದಿಗಳನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುವ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕೆಂದರು.
 ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂದು ಜಾಗತೀಕರಣದಿಂದ ರಂಗಭೂಮಿ ನಶಿಸಿಹೋಗುತ್ತಿದೆ. ರಂಗಭೂಮಿ ಜಾತ್ಯತೀತವಾಗಿದ್ದು, ಜೀವಂತ ವ್ಯಕ್ತಿಗಳ ಸಂವಾದವನ್ನು ರಂಗಭೂಮಿ ತೋರಿಸುತ್ತಿದೆ ಎಂದರು.
ಪರಿಸರ ನಾಶ: ಪರಿಸರ ಚಿಂತಕ ಷಡಕ್ಷರ ದೇವರು ಮಾತನಾಡಿ ಮನುಷ್ಯನಾದವನು ಸಕಲ ಜೀವಕ್ಕೆ ಲೇಸನ್ನೇ ಬಯಸಬೇಕು. ಮನುಷ್ಯರ ಸ್ವಾರ್ಥಕ್ಕೆ ಪರಿಸರ ಸಿಲುಕಿ ನಾಶವಾಗುತ್ತಿದೆ. ಸರಳ ಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ದೇಹ ಕರಗಿಸುವ ದಂಡಿಸುವ ಶಕ್ತಿ ಇರುವುದು ಹಳ್ಳಿಗಾಡಿನ ರೈತರಿಗೆ ಮಾತ್ರ. ಸುಖ ಜೀವನದಿಂದ ಅನಾರೋಗ್ಯ ಹೆಚ್ಚುತ್ತಿದ್ದು, ಶಿಕ್ಷಣ ಪಡೆದಿರುವವರಲ್ಲಿ ದ್ವೇಷ ಅಸೂಯೆಗಳು ಹೆಚ್ಚು ಕಾಣುತ್ತಿರುವುದು ನಿಜಕ್ಕೂ ಸಮಾಜದಲ್ಲಿ ಅಸಮಾನತೆ ತಾಂಡವವಾಡಲು ಕಾರಣವಾಗುತ್ತಿದೆ ಎಂದರು. ಚಿತ್ರನಟ ಅಚ್ಚುತ ಕುಮಾರ ಮಾತನಾಡಿ ಕಲ್ಪವೃಕ್ಷ ಕಲ್ಪತರು ನಾಡಿನ ಜನತೆ ಸಹೃದಯವಂತರಾಗಿದ್ದು ಕಲೆ, ಸಾಹಿತ್ಯ, ಅಭಿನಯ ಎಲ್ಲವೂ ಬೆಳೆಯಲು ಸಹಕರಿಸುತ್ತಾರೆ. ಕಲ್ಪತರು ನಗರಿಯಲ್ಲಿ ಶಿಕ್ಷಣ, ಕಲೆ ಪಡೆದು ನಾನು ಧನ್ಯತನಾಗಿದ್ದೇನೆ ಎಂದರು.
 ಕಿರುತೆರೆ ನಟ ಧರ್ಮೇಂದ್ರ ಕುಮಾರ್ ಮಾತನಾಡಿ ರಂಗಭೂಮಿಯಲ್ಲಿ ಚಿಂತನೆ ಇದ್ದು, ಹೆಚ್ಚೆಚ್ಚು ಅವಕಾಶವನ್ನು ಕಲಾವಿದನಿಗೆ ನೀಡುತ್ತಿದೆ. ನಟನೆಗೆ ಸಹಾಯ ಮಾಡಿದ ಕಲ್ಪತರು ನಾಡಿನಲ್ಲಿ ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ವಿಚಾರಗಳು ಮಂಡನೆಯಾಗಿವೆ ಎಂದರು.  ಸಮಾರಂಭದಲ್ಲಿ  ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಟರಾಜ್ ಹೊನ್ನವಳ್ಳಿ, ಕಿರುತೆರೆ ನಟ ಅನಿಲ್ ಕುಮಾರ್, ಕೈಲಾಸ, ಕಸಾಪ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಸರಸ್ವತಿ ಭೂಷಣ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement