ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಚಿವ ಸಂಪುಟ ಒಪ್ಪಿಗೆ: ನೀರಾವರಿ ಹೋರಾಟಕ್ಕೆ ಸಂದ ಜಯ: ಶಿವಣ್ಣ

Rashmi Kasaragodu
Updated On : 15 Mar 2013, 12:40 pm

ಕಪ್ರ ವಾರ್ತೆ,ಮಧುಗಿರಿ.ಮಾ 14 ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿಲು  ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿರುವುದು ನಮ್ಮ ನೀರಾವರಿ  ಹೋರಾಟಕ್ಕೆ ಸಂದ ಜಯ  ಎಂದು ಜೆಡಿಎಸ್ ಮುಖಂಡ ಬಿ.ಎನ್.ಶಿವಣ್ಣ ಹೇಳಿದ್ದಾರೆ.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಶ್ಚಿಮಾಭಿಮುಖವಾಗಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನು ಮಧ್ಯ ಕರ್ನಾಟಕದ 9 ಜಿಲ್ಲೆಗಳಿಗೆ 48 ತಾಲೂಕುಗಳಿಗೆ ನೀರು ಹರಿಸುವ ಮೂಲಕ  ಈ ಭಾಗದ ರೈತ ಸಮುದಾಯಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದಾಗ  ಮಾತ್ರ ಬಯಲು ಸೀಮೆ ಪ್ರದೇಶದ ರೈತರ, ಕೂಲಿಕಾರ್ಮಿಕರ ಹಾಗೂ ಕೃಷಿಕರ  ಬದುಕು ಹಸನ ಮಾಡಲು ಸಾಧ್ಯ ಎಂದರು.
ಮನವಿ ಪತ್ರ: ಹಿಂದೆ ಮಧುಗಿರಿಯಲ್ಲಿ ಪರಮಶಿವಯ್ಯ ವರದಿ ಯಥಾವತ್ತು ಜಾರಿಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಸರ್ಕಾರದ ಗಮನ ಸಳೆಯುವ ಜತೆಗೆ ವಿಧಾನ ಸೌಧಕ್ಕೆ ತೆರಳಿ  ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರ ನೀಡಿದ್ದೆವು. ಇದಕ್ಕೆ ಸ್ಪಂದಿಸಿ ಪರಮಶಿವಯ್ಯ ವರದಿ ಪ್ರಕಾರ  ಶಾಶ್ವತ ನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ. ಈ ಯೋಜನೆಯಿಂದ ರಾಜ್ಯದ ಮಧ್ಯ ಕರ್ನಾಟಕದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮಂಡ್ಯ ಹೀಗೆ  9 ಜಿಲ್ಲೆಗಳು, 48 ತಾಲೂಕುಗಳ 9 ಸಾವಿರ ಕೆರೆ, 15 ಸಾವಿರ  ಗೋಕಟ್ಟೆಗಳಿಗೆ  ನೀರುಣಿಸುವುದಲ್ಲದೆ ಈ ಭಾಗದ ಜನರಿಗೆ ನೀರಾವರಿ ಸೌಲ್ಯ ಒದಗಿಸಿದಂತಾಗುತ್ತದೆ  ಎಂದರು.
ಹಣ ಮೀಸಲು: ಈಗಾಗಲೇ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದು, ಅತಿ ಶೀಘ್ರದಲ್ಲೇ ಇದಕ್ಕೆ ಸಂಬಂಧಪಟ್ಟ ಕಚೇರಿಯನ್ನು ತುಮಕೂರಿನಲ್ಲಿ ತೆರೆದು ಕಾಮಗಾರಿ ಕೈಗೊಳ್ಳಲಿದೆ ಎಂದ ಶಿವಣ್ಣ,  ಮಧುಗಿರಿ ನಂಜುಂಡಪ್ಪ ವರದಿ ಪ್ರಕಾರ  ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಸಾಕಷ್ಟು ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ತಾಲೂಕಿನಿಂದ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.  ಇದನ್ನು ತಡೆಯಲು ಮಧುಗಿರಿಗೆ ಕೈಗಾರಿಕೆ ತೆರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ  ಧರಣಿ ಮೂಲಕ ಆಗ್ರಹಿಸಿ ಮನವಿ ನೀಡಲಾಗಿತ್ತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement