ಅನ್ಯಾಯ, ಭ್ರಷ್ಟಾಚಾರ ಪ್ರಶ್ನಿಸಿ: ದೊಡ್ಡಮನೆ ಗೋಪಾಲಗೌಡ
ತುಮಕೂರು: ಅನ್ಯಾಯ, ಭ್ರಷ್ಟಾಚಾರ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಕರೆ ನೀಡಿದರು.
ಅವರು ಕೆಎಸ್ಆರ್ಟಿ ಆವರಣದಲ್ಲಿ ಏರ್ಪಾಟಾಗಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು. ಜನತೆ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವ ಉದ್ದೇಶದಿಂದ, ಅನ್ಯಾಯ, ಭ್ರಷ್ಟಾಚಾರ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವ ಉದ್ದೇಶದಿಂದಲೇ ಬಸ್ ನಿಲ್ದಾಣಗಳಂತಹ ಜನಸಂದಣಿ ಇರುವ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸುವ್ಯವಸ್ಥಿತ ಸಮಾಜ, ಪಾರದರ್ಶಕತೆ ಬೆಳೆಯಲು ಇಂತಹ ಕಾರ್ಯಕ್ರಮ ಏರ್ಪಾಟು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇಂದು ನ್ಯಾಯ ವಿತರಣೆ ಬಹಳ ದುಬಾರಿಯಾಗಿದೆ. ನಿಧಾನಗತಿ ನ್ಯಾಯದಾನ ತಡೆಗಟ್ಟುವ ಉದ್ದೇಶದಿಂದಲೇ, ಜನರ ಬಳಿಗೇ ಕಾನೂನು ಸಾಕ್ಷರತಾ ರಥ, ಅರಿವು-ನೆರವು, ಸಂಚಾರಿ ಜನತಾ ನ್ಯಾಯಾಲಯ ವ್ಯವಸ್ಥೆ ತರಲಾಗಿದೆ. ಪ್ರಕರಣಗಳು ದಶಕಗಳೇ ಕಳೆದರೂ ಮುಗಿಯದ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಪ್ರಕರಣಗಳು ಬಾಕಿಯಿವೆ. ಒಂದು ರೀತಿ ನ್ಯಾಯಾಂಗ ವ್ಯವಸ್ಥೆ ಪ್ರಕರಣಗಳ ಭಾರಕ್ಕೆ ಕುಸಿಯುವ ಆತಂಕದಿಂದಲೇ ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರ, ಹಳ್ಳಿಗಳಿಗೆ ಸಂಚಾರಿ ಜನತಾ ನ್ಯಾಯಾಲಯಗಳಂತಹ ವ್ಯವಸ್ಥೆ ಮಾಡಲಾಗಿದೆ. ಕಾನೂನು ಅರಿವು-ನೆರವು ನೀಡಲು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನತೆ ಹಕ್ಕು ಪ್ರತಿಪಾದನೆ ಮಾಡಿ,ಇರುವ ಸೌಲಭ್ಯ ಬಳಸಿಕೊಳ್ಳಿ ಎಂದರು.