ವೃಥಾ ಕೋರ್ಟ್ಗೆ ಅಲೆಯಬೇಡಿ
ಕಪ್ರ, ವಾರ್ತೆ, ತುಮಕೂರು, ಮಾ.15 ಜನತೆ ವಿನಾಕಾರಣ ನ್ಯಾಯಾಲಯಕ್ಕೆ ಅಲೆಯಬಾರದು. ನ್ಯಾಯಾಲಯಕ್ಕೆ ವಿನಾಕಾರಣ ಅಲೆಯುವುದನ್ನು ತಪ್ಪಿಸುವುದೇ ಸಂಚಾರಿ ಜನತಾ ನ್ಯಾಯಾಲಯದ ಉದ್ದೇಶ ಹಾಗೂ ಕಾನೂನು ಸಾಕ್ಷರತಾ ರಥದ ಧ್ಯೇಯ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸದಾನಂದ ಎಂ. ದೊಡ್ಡಮನಿ ಪ್ರತಿಪಾದಿಸಿದರು.
ಅವರು ತುಮಕೂರಿನ ಕೆಎಸ್ಆರ್ಟಿ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ಜಿಲ್ಲಾಡಳಿತ, ಜಿಪಂ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಕಾನೂನು ಅರಿವು-ನೆರವು ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶ ಸಾಮಾನ್ಯ ಜನತೆಯ ಹಿತದೃಷ್ಟಿ ಒಳ್ಳೆಯ ಸಮಾಜ ನಿರ್ಮಾಣ. ಈ ಹಿನ್ನೆಲೆಯಲ್ಲಿ ಜನತೆಯ ಮನೆ ಬಾಗಿಲಿಗೇ ಸಂಚಾರಿ ನ್ಯಾಯಾಲಯಗಳನ್ನು ಕೊಂಡೊಯ್ಯಲಾಗುತ್ತಿದೆ. ಇದೇ ಹಿನ್ನೆಲೆಯಲ್ಲೇ ಮಧ್ಯಸ್ಥಿಕೆ ಕೇಂದ್ರಗಳು, ಲೋಕ ಅದಾಲತ್ಗಳು ಕೂಡ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಮರೆಯಬಾರದು. ಜನತೆ ಇವುಗಳ ಮಹತ್ವ ಅರಿತು ಸದುಪಯೋಗ ಪಡೆದುಕೊಳ್ಳುವಂತೆ ಸದಾನಂದ ದೊಡ್ಡಮನಿ ಕರೆ ನೀಡಿದರು.
ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು: ಕಾನೂನು ಚೌಕಟ್ಟಿನಲ್ಲಿ ವ್ಯವಸ್ಥೆ ನಡೆಯುವಂತೆ ಮಾಡುವುದೇ ಕಾನೂನು ಸಾಕ್ಷರಥ ಕಾರ್ಯಕ್ರಮದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿಯೂ ಲೀಗಲ್ ಲಿಟರೆಸಿ ಕ್ಲಬ್ಗಳನ್ನು ತೆರೆಯಲಾಗಿದೆ. ಮಾಡಬಾರದ ಕೆಲಸ ಮಾಡಿ, ಕ್ಷಮೆ ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನಿನ ಅರಿವಿಲ್ಲದೆ ತಪ್ಪು ಮಾಡಿದೆ ಎಂದು ಹೇಳುವ ಹಾಗಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯುವುದು ಅತ್ಯಗತ್ಯವಾಗಿದೆ. ಕಾನೂನು ಸಾಕ್ಷರತಾ ರಥದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 1.25 ಲಕ್ಷ ರು. ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಇರುವವರು ಉಚಿತ ಕಾನೂನು ನೆರವನ್ನು ಸಹ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅರಿವಿಲ್ಲದಿದ್ದರೆ ತೊಂದರೆ: ಕಾನೂನು ಸಾಕ್ಷರಥಾ ರಥ ಹಾಗೂ ಸಂಚಾರಿ ಲೋಕ ಅದಾಲತ್ಗೆ ಚಾಲನೆ ನೀಡಿದ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಖಾಜಿ ಜಯಿಬುನ್ನೀಸಾ ಮೊಹಿಯುದ್ದಿನ್ ಮಾತನಾಡಿ, ಕಾನೂನು ಅರಿವಿಲ್ಲದೆ ಇದ್ದರೆ ತೊಂದರೆ ಖಚಿತ. ಹಕ್ಕು ಮತ್ತು ಕರ್ತವ್ಯ ಬಹಳ ಮುಖ್ಯ. ಕಾನೂನು ಅರಿತಲ್ಲಿ ಜೀವನ ಸುಗಮ ಎಂದು ವಿವರಿಸಿದರು.