ಆರೋಗ್ಯಪೂರ್ಣ ಸಮಾಜಕ್ಕೆ ಕ್ರೀಡೆ ಅತ್ಯಗತ್ಯ
ತುಮಕೂರು: ಆರೋಗ್ಯಪೂರ್ಣ ಸಮಾಜಕ್ಕಾಗಿ ಕ್ರೀಡೆ ಅತ್ಯಗತ್ಯ ಎಂದು ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಎಚ್.ಯು. ತಳವಾರ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಶಿರಾ ರಸ್ತೆಯಲ್ಲಿರುವ ಶ್ರೀದೇವಿ ಪಾಲಿಟೆಕ್ನಿಕ್ ಆವರಣದಲ್ಲಿ ಏರ್ಪಾಟಾಗಿದ್ದ 36 ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ದೈಹಿಕ - ಮಾನಸಿಕ ಆರೋಗ್ಯಕ್ಕಾಗಿ ಉತ್ತಮ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಕ್ರೀಡೆ ಹಾಗೂ ಕ್ರೀಡಾ ಕೂಟಗಳು ಅತ್ಯವಶ್ಯ. ಇಂತಹ ಕ್ರೀಡಾಕೂಟಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಲ್ಲಿ ಸ್ನೇಹ, ವಿಶ್ವಾಸ, ಸೌಹಾರ್ದತೆ ಮೂಡಲಿದೆ. ಹಾಗೂ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚುವಂತಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಗಂಗಾಧರ ಕೊಡ್ಲಿಯವರ್ ಮಾತನಾಡಿ, ಶಿಕ್ಷಣ ಹಾಗೂ ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡಿ, ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ನಿರಂಜನ್ದಾಸ್ ರಾಜ್ವಾನ್ ಮತ್ತು ಎ.ಎಂ. ಬೋಜೇಧರ್, ಜಿಪಂ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಧ್ವಜಾರೋಹಣ: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ಕೆ. ಸುಕುಮಾರನ್ ಧ್ವಜಾರೋಹಣ ನೆರವೇರಿಸಿದರು. ಡಾ. ರಮಣ್ಹುಲಿನಾಯ್ಕರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮುಖ್ಯ ಆಡಳಿತಾಧಿಕಾರಿ ಟಿ.ವಿ. ಬ್ರಹ್ಮದೇವಯ್ಯ, ವಿವಿಧ ಕಾಲೇಜುಗಳ ಪ್ರಿನ್ಸಿಪಾಲರು, ಉಪನ್ಯಾಸಕರು, ತರಬೇತುದಾರರು, ಉಪಸ್ಥಿತರಿದ್ದರು. ಅಥ್ಲೆಟಿಕ್ ತರಬೇತುದಾರ ಹಾಗೂ ರಾಷ್ಟ್ರೀಯ ಕ್ರೀಡಾಪಟು ಎಂ.ಆರ್. ಶಿವಪ್ರಸಾದ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ರೂಪಾ ನಾಗೇಂದ್ರ ಪ್ರಾರ್ಥಿಸಿ, ಎನ್.ವಿ. ಜಯದೇವಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ನಯನ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎಚ್.ಎಸ್. ಮಲ್ಲಿಕಾರ್ಜುನ್ ಕ್ರೀಡಾಚಟುವಟಿಕೆಗಳ ಸಾಧನೆ ವಿವರಿಸಿದರು. ಉಪನ್ಯಾಸಕ ಪ್ರೊ. ಸಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಆರ್. ರಾಮಮೂರ್ತಿ ವಂದಿಸಿದರು.