ಬಿಜೆಪಿ ಸರ್ಕಾರದ ಆಡಳಿತ ರಾಜ್ಯಕ್ಕೆ ಕಳಂಕ
ಕ.ಪ್ರ. ವಾರ್ತೆ ಕೊರಟಗೆರೆ ಮಾ. 16
ಕೆಂಗಲ್ ಹನುಮಂತಯ್ಯನವರ ಆಡಳಿತ ದೇಶದಲ್ಲೆ ಮಾದರಿಯಾಗಿದ್ದು ಆದರೆ ಕಳೆದ 5 ವರ್ಷದ ರಾಜ್ಯ ಸರ್ಕಾರದ ಆಡಳಿತ ಇದಕ್ಕೆ ವಿರುದ್ಧವಾಗಿದೆ. ಕಳಂಕ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ 2.80 ಕೋಟಿ ರೂ ವೆಚ್ಚದ ನೂತನ ಮಿನಿ ವಿಧಾನಸೌದ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರು. ಬಜೆಟ್ ಮಂಡಿಸಿ ಕೋಟ್ಯಂತರ ರು.ಗಳನ್ನು ಅಭಿವೃದ್ಧಿಗೆ ಘೋಷಣೆ ಮಾಡಿದ್ದರೂ ಯಾವುದೇ ಸಾಮಾಜಿಕ ಅಭಿವೃದ್ಧಿಯಾಗಿಲ್ಲ ಎಂದ ಅವರು ಕಳೆದ 5 ವರ್ಷಗಳ ಹಿಂದೆ ಕೊರಟಗೆರೆ ಮಿನಿ ವಿಧಾನಸೌಧ ಕಟ್ಟಡ ಮತ್ತು ಪಟ್ಟಣದ ಮೂಲಕ ಹಾದು ಹೋಗಿರುವ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿ ಗುತ್ತಿಗೆ ನೀಡಿದ್ದರೂ ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ 5 ವರ್ಷ ಬೇಕಾಯಿತು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕುಡಿವ ನೀರಿಲ್ಲ: ರಾಜ್ಯದ ಮಧ್ಯಕರ್ನಾಟಕದ ಸುಮಾರು 65 ತಾಲೂಕುಗಳಲ್ಲಿ ಜನರಿಗೆ ಕುಡಿಯಲು ನೀರು ದೊರೆಯುತ್ತಿಲ್ಲ. ಆದ್ದರಿಂದ ಯಾವುದೇ ಸರ್ಕಾರ ಬಂದರೂ ನೀರಾವರಿಗೆ ಹೆಚ್ಚು ಒತ್ತು ನೀಡಬೇಕು. ಈಗಾಗಲೆ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕಿದೆ. ನೇತ್ರಾವತಿ ನದಿಯ ಸುಮಾರು 180 ಟಿ.ಎಂ.ಸಿ.ನೀರು ಸಮುದ್ರ ಪಾಲಾಗುತ್ತಿದೆ ಅದರಲ್ಲಿ 45 ಟಿ.ಎಂ.ಸಿ ನೀರನ್ನು ಉಪಯೋಗಿಸಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳುವ ಜೊತೆಗೆ ರೈತರಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹೋರಾಟದ ಮೂಲಕ ರೈತರು ಯೋಜನೆ ಅನುಷ್ಠಾನಗೊಳಿಸಿಕೊಳ್ಳ ಬೇಕಾಗಿದೆ ಎಂದರು.
ತಪ್ಪಲಿದೆ ಅಲೆದಾಟ: ನೂತನ ಮಿನಿವಿಧಾನಸೌಧ ನಿರ್ಮಾಣದಿಂದ ತಾಲೂಕು ಮಟ್ಟದ ಕಚೇರಿಗಳು ಒಂದೆಡೆ ಲಭ್ಯವಾಗುವುದರಿಂದ ರೈತರು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಸಿ.ಚನ್ನಿಗಪ್ಪ ಹಾಗೂ ಕೊರಟಗೆರೆ ತಾಲೂಕಿನವರಾದ ಮುಖ್ಯ ಎಂಜಿನಿಯರ್ ಜೈಪ್ರಕಾಶ್ ಹೆಚ್ಚು ಒತ್ತು ನೀಡಿ ಆಸಕ್ತಿವಹಿಸಿ ಮಿನಿ ವಿಧಾನಸೌದ ನಿರ್ಮಾಣಕ್ಕೆ ನೆರವಾದರು ಎಂದು ಶ್ಲಾಘಿಸಿ ಅಭಿನಂದಿಸಿದರು.
ಸರ್ಕಾರದ ಕರ್ತವ್ಯ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಶಿವಣ್ಣ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸವಲತ್ತು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರ ನೀಡುವ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುವಂತೆ ಮಾಡಬೇಕಿದೆ ಅತಿ ಶೀಘ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ಉದ್ಘಾಟನಾ ಕಾರ್ಯವನ್ನು ತುರ್ತಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದರು.
ಮಾಜಿ ಸಚಿವ ಸಿ.ಚನ್ನಿಗಪ್ಪ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ಲಂಚ ಹೊಡಿ ಜೈಲಿಗೆ ನಡಿ ಎಂಬ ತತ್ವವನ್ನು ಅಳವಡಿಸಿಕೊಂಡತೆ ಕಾರ್ಯ ನಿರ್ವಹಿಸಿತೆ ಹೊರತು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಆರೋಪಿಸಿದರು. ಜಿ.ಪಂ.ಅಧ್ಯಕ್ಷೆ ಪ್ರೇಮಾಮಹಾಲಿಂಗಪ್ಪ, ಜಿಲ್ಲಾಧಿಕಾರಿ ಆರ್.ಕೆ. ರಾಜು, ಜಿ.ಪಂ.ಸದಸ್ಯರಾದ ಸುಧಾಕರಲಾಲ್, ಪ್ರಸನ್ನ ಕುಮಾರ್, ದಾಕ್ಷಾಯಿಣಿ ರಾಜಣ್ಣ, ತಾ.ಪಂ.ಅಧ್ಯಕ್ಷೆ ಅನಿತಾ, ಪ.ಪಂ.ಸದಸ್ಯರಾದ ಕೆ.ವಿ.ಮಂಜುನಾಥ್, ಸೈಯದ್ ಸೈಪುಲ್ಲಾ, ರಾಜಮ್ಮ, ಕೆ.ಎಲ್. ಆನಂದ್, ತಹಸೀಲ್ದಾರ್ ಏಕೇಶ್ ಬಾಬು, ವಿಜಯರಾಜು, ಇ.ಒ.ಗೋಪಾಲ್, ಎಇಇ ಸಂಜೀವರಾಜು, ಎಇ ವಿಜಯ ಕುಮಾರ್, ಗುತ್ತಿಗೆದಾರ ರಾಮಕೃಷ್ಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಸಾಮರ್ಥ್ಯಸೌದ, ಬೈಚಾಪುರ ಮೊರಾರ್ಜಿ ವಸತಿ ಶಾಲೆ ಕಟ್ಟಡ ಉದ್ಘಾಟನೆ ಹಾಗೂ ಸಣ್ಣ ನೀರಾವರಿ ಇಲಾಖೆಯ 50 ಲಕ್ಷ ರು. ಅಂದಾಜಿನ ಬಿರದೇನಹಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ 2.40 ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಲಾಯಿತು