ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಸತಿ ರಹಿತರ ಮನೆ ನಿರ್ಮಾಣಕ್ಕೆ ಕಾಲಮಿತಿ

Rashmi Kasaragodu
Updated On : 16 Mar 2013, 11:54 am

ಕ.ಪ್ರ. ವಾರ್ತೆ  ಕುಣಿಗಲ್  ಮಾ.16
ತಾಲೂಕಿನಾದ್ಯಂತ 36 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿಯ ವಸತಿ ಯೋಜನೆಯಡಿಯಲ್ಲಿ ಈಗಾಗಲೆ ಗುರುತಿಸಲಾಗಿರುವ, ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಕಾಲಮಿತಿ ನಿಗದಿಗೊಳಿಸಿ, ಈ ನಿಟ್ಟಿನಲ್ಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಯೋಜನೆಯ ಪೂರ್ಣ ಯಶಸ್ಸು ಸಾಧಿಸಲು ಶ್ರಮಿಸುವುದಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ರಾಮಚಂದ್ರಯ್ಯ ತಿಳಿಸಿದರು.
  ಶುಕ್ರವಾರ, ತಾಪಂ ಅಧ್ಯಕ್ಷೆ ನಿರ್ಮಲಾಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ, ವಸತಿ ಯೋಜನೆಯ ಪ್ರಗತಿಗೆ, ತಾಲೂಕಿನ ವಿವಿಧ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳ ನಿರ್ಲಕ್ಷ್ಯದಿಂದ ಈಗಾಗಲೆ ಅನುಮೋದನೆಗೊಂಡ ಸಾವಿರ ಮನೆ ನಿರ್ಮಾಣದ ಅನುದಾನ ಕೈ ತಪ್ಪಿದೆ. ಪ್ರಸಕ್ತ ಸಾಲಿನ ಕೆಲವೆ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಈ ಸಾಲಿನ ಯೋಜನೆಯೂ ಕೈತಪ್ಪುವ ಭೀತಿ ಎದುರಾಗಿದೆ ಎಂದು ಉಪಾಧ್ಯಕ್ಷ ಲೋಕೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಸದಸ್ಯರಾದ ನರಸಿಂಹಮೂರ್ತಿ, ಅಶ್ವಥಮ್ಮ, ಸಿದ್ದಲಿಂಗಯ್ಯ, ಹನುಮಾನಾಯಕ್ ಆತಂಕ ವ್ಯಕ್ತಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಇವರನ್ನು ಒತ್ತಾಯಿಸಿದರು.
ಕಾಲಮಿತಿ: ಇದಕ್ಕೆ ಸ್ಪಂದಿಸಿದ ಇಒ, ಮೇಲಿನಂತೆ ತಿಳಿಸಿದರಲ್ಲದೆ, ಈಗಾಗಲೇ 1054 ಮನೆಗಳ ನಿರ್ಮಾಣ ಕಾರ್ಯ ಕೆಲತಾಂತ್ರಿಕ ತೊಂದರೆಯಿಂದ ರಾಜೀವಗಾಂಧಿ ವಸತಿ ನಿಗಮದಿಂದ ಅನುಮೋದನೆಗೊಳ್ಳದೆ ನಿರಾಕರಿಸುವ ಹಂತದಲ್ಲಿದೆ. ಹೊಸದಾಗಿ 784 ಮನೆಗಳ ನಿರ್ಮಾಣ ಕಾರ್ಯಕ್ಕೂ ಸಹ ಸೂಕ್ತ ಕಾಲಮಿತಿಯೊಳಗೆ ವರದಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸದ ಕಾರಣ ತೊಂದರೆಯಾಗಿದೆ. ತಾವೇ ಖುದ್ದಾಗಿ, ಶಾಸಕರೊಂದಿಗೆ ತೆರಳಿ, ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ್ದು, ನಿಗಮದ ಮುಖ್ಯಸ್ಥರು ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದರಿಂದ, ತಾಪಂ ಕಾರ್ಯದರ್ಶಿ ಸಿಬ್ಬಂದಿಗಳ ವಿಶೇಷ ಸಭೆ ಕರೆದು ನಿಗದಿತ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು  ಶ್ರಮಿಸಲಾಗುತ್ತಿದೆ ಎಂದರು.
ಅಸಮಾಧಾನ: ಹುಲಿಯೂರುದುರ್ಗ ಗ್ರಾಪಂ ಪಿಡಿಒ ತಮ್ಮ ಅಧಿಕಾರ ದುರ್ಬಳಕೆಮಾಡಿಕೊಂಡು ಸಾವಿರಾರು ರು. ಅಕ್ರಮ ಎಸಗಿದ್ದು ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಂಡಿದ್ದರೂ, ತಾಪಂ ಲೆಕ್ಕಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಾಯಿಸಮಿತಿ ಅಧ್ಯಕ್ಷ  ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರೆ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಮಣ್ಣ ಲೆಕ್ಕಾಧಿಕಾರಿಯ ವಿರುದ್ಧ ವಾಗ್ವಾದ ನಡೆಸಿ, ತಪ್ಪು ನಡೆದಿದ್ದರೂ ಪಿಡಿಒರನ್ನು ಲೆಕ್ಕಾಧಿಕಾರಿ ರಕ್ಷಿಸುತ್ತಿದ್ದಾರೆಂದು ದೂರಿದರು.
 ಲೆಕ್ಕಾಧಿಕಾರಿ ಶ್ರೀನಿವಾಸ್, ಮಾಜಿ ಅಧ್ಯಕ್ಷರ ಮಾತಿಗೆ ಕೆರಳಿ, ತನಿಖೆ ಮಾಡಲು ಗ್ರಾಪಂಗೆ ತೆರಳಿದರೆ ಅಲ್ಲಿ ಒಂದು ಗುಂಪು ವ್ಯವಸ್ಥಿತವಾಗಿ ಹಲ್ಲೆಗೆ ಬರುತ್ತಾರೆ, ಇಲ್ಲಿ ನೋಡಿದರೆ ಹಳೇ ಇಒ ಎನೂ ಮಾಡಬೇಡಿ ನಾನು ನೋಡ್ಕೋತ್ತೀನಿ ಅನ್ನುತ್ತಾರೆ. ತನಿಖೆಗೆ ಯಾರೂ ಸಹಕರಿಸದೆ ಅಧಿಕಾರಿಗಳ ಮೇಲೆ ಗೂಬೆಕೂರಿಸುವ ಕೆಲಸ ಬೇಡ ಎಂದು ವಾಗ್ವಾದಕ್ಕೆ ಇಳಿದರು.
ವಿಷಯ ಅಂತ್ಯ: ಕೆಲಕಾಲದ    ವಾಗ್ವಾದದ ನಂತರ ಮದ್ಯಪ್ರವೇಶಿಸಿದ ಇಒ, ಈ ಬಗ್ಗೆ ಮುಂದಿನ ಸಭೆಯಲ್ಲಿ ಅಗತ್ಯ ವರದಿ ನೀಡುವ ಭರವಸೆ ಮೇರೆಗೆ ವಿಷಯ ಅಂತ್ಯಗೊಂಡಿತು. ನಿರ್ಮಲ ಭಾರತ ಯೋಜನೆಯ ಪ್ರಗತಿ ವಿವರ ನೀಡಿದ ಬೆಟ್ಟಸ್ವಾಮಿಗೌಡ, ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ    24000 ಮನೆಗಳನ್ನು ಶೌಚರಹಿತ ಎಂದು ಗುರುತಿಸಲಾಗಿದ್ದು ಈಗಾಗಲೆ 3884 ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನರೇಗ, ನಿ.ಭಾ.ಅಯಡಿಯಲ್ಲಿ ಕೈಗೊಳ್ಳಲಾಗಿದೆ. ಹುಲಿಯೂರುದುರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಯಾವುದೇ ಶೌಚಾಲಯ ನಿರ್ಮಾಣಕ್ಕೆ ಪಿಡಿಒ ಸಹಕರಿಸದ ಹಿನ್ನೆಲೆಯಲ್ಲಿ ನೊಟೀಸ್ ಜಾರಿ ಮಾಡಲಾಗಿದೆ ಎಂದರು.
ವಿಶೇಷ ಘಟಕ ಯೋಜನೆಯಡಿಯಲ್ಲಿ ಇತರೆ ತಾಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಪಟ್ಟಿ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಹಿಳಾ ಸದಸ್ಯರೂ ಸೇರಿದಂತೆ ಸದಸ್ಯರಾದ ನರಸಿಂಹಮೂರ್ತಿ, ಸಿದ್ದಲಿಂಗಯ್ಯ ಸಭೆಯ ಪ್ರತಿಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿ ಮಾಡಿರುವ ಕ್ರಿಯಾ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿದರು. ಇದೇ ಯೋಜನೆಯಡಿಯಲ್ಲಿ, ಪ.ಜಾತಿ ಜನಾಂಗದ ಇಬ್ಬರಿಗೆ ಸಾಲಮರುಪಾವತಿಗೆ ಸಹಕಾರ ಬ್ಯಾಂಕ್ನಲ್ಲಿ ತಾಪಂ ಗುರುತಿಸಿದ ಫಲಾನುಭವಿಗಳನ್ನು ಬಿಟ್ಟು , ಪಿಎಲ್ಡಿ ಬ್ಯಾಂಕ್ ತಮಗಿಷ್ಟ ಬಂದವರಿಗೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement