ಆನೆ ತುಳಿತಕ್ಕೆ ಬಲಿ
ತುಮಕೂರು: ಕಾಡಾನೆ ತುಳಿತಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತುಮಕೂರು ತಾಲೂಕು ಕುಂಕುಮನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಶಿರಾ ತಾಲೂಕು ಯತ್ತಪ್ಪನಹಟ್ಟಿಯ ಬಾಲಯ್ಯ(35) ಎಂಬಾತನೆ ಸಾವನ್ನಪ್ಪಿದ ದುರ್ದೈವಿ. ಭಾನುವಾರ ಬೆಳಗಿನ ಜಾವ ಸಮೀಪದ ಕುಂಕುಮನಹಳ್ಳಿಯಲ್ಲಿ ವಲಸೆ ಬಂದಿದ್ದ ಕುರಿಗಾರರು ಮಲಗಿದ್ದ ವೇಳೆ ದಾಳಿ ನಡೆಸಿದ ಮೂರು ಕಾಡಾನೆಗಳ ಹಿಂಡು ಬಾಲಯ್ಯ ಎಂಬುವನನ್ನು ತುಳಿದು ಹಾಕಿವೆ. ಪರಿಣಾಮ ಬಾಲಯ್ಯ ಅಸುನೀಗಿದ್ದಾನೆ. ದಾಳಿಗೆ ತುತ್ತಾದ ಬಾಲಯ್ಯ ಕುಟುಂಬಕ್ಕೆ ಜಿಲ್ಲಾಡಳಿತದಿಂದ 5 ಲಕ್ಷ ಪರಿಹಾರ ಘೋಷಿಸಲಾಗಿದ್ದು ತಾತ್ಕಾಲಿಕವಾಗಿ ಅರಣ್ಯ ಇಲಾಖೆಯಿಂದ ರು. 2 ಲಕ್ಷ ಪರಿಹಾರ ನೀಡಲಾಗಿದೆ.