ಬಡವರ ಹಿತ ಕಾಪಾಡುವುದೇ ಬಿಎಸ್ಪಿ ಧ್ಯೇಯೋದ್ದೇಶ: ಮುನಿಯಪ್ಪ ಘೋಷಣೆ
ಕ.ಪ್ರ.ವಾರ್ತೆ ್ಣ ಮಧುಗಿರಿ ್ಣ ಮಾ. 19
ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಮೇಲ್ವರ್ಗದ ಬಡವರ ಹಿತ ಕಾಪಾಡುವುದೇ ಬಹುಜನ ಸಮಾಜ ಪಾರ್ಟಿಯ ಧ್ಯೇಯೋದ್ದೇಶ ಎಂದು ರಾಜ್ಯ ಖಜಾಂಚಿ ಕೋರಮಂಗಲ ಮುನಿಯಪ್ಪ ಹೇಳಿದ್ದಾರೆ.
ಇತ್ತಿಚೆಗೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಾಲೂಕು ಬಿಎಸ್ಪಿ ಕಾರ್ಯಕರ್ತರು ಏರ್ಪಡಿಸಿದ್ದ ಬಿಎಸ್ಪಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಕಾನ್ಷೀರಾಮ್ ಜನ್ಮ ದಿನಾಚರಣೆ ಸಮಾರಂಭವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾನ್ಷೀರಾಮ್ ಬಾಲ್ಯದಿಂದಲೇ ನ್ಯಾಯ, ನೀತಿ ಧರ್ಮದ ಪರ ನಿಂತವರಲ್ಲದೆ ನೇರ ನಡೆ ನುಡಿ ವ್ಯಕ್ತಿತ್ವ ಮೈಗೂಡಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ಸಮಾಜ ಚಿಂತಕ ನಾಯಕರಾಗಿ ಹೊರ ಹೊಮ್ಮಿದರು.ಬಹುಜನ ಸಮಾಜ ಪಾರ್ಟಿಯನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ, ಮೇಲ್ವರ್ಗದ ಬಡವರ ಹಾಗೂ ಎಲ್ಲ ವರ್ಗದ ಬಡವರ ಏಳಿಗೆಗೆ ಹಗಲಿರುಳು ಕಷ್ಟಪಟ್ಟು ಕಟ್ಟಿದ ಪರಿಣಾಮ ಇಂದು ರಾಷ್ಟ್ರ ಮಟ್ಟದಲ್ಲಿ ಬಿಎಸ್ಪಿ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲು ಅವರ ಚಿಂತನೆ ಕಾರಣ ಎಂದು ಕೊಂಡಾಡಿದರು.
ನಾನೇ ಸ್ಪರ್ಧಿ: ಜನಪರ ಕಾಳಜಿ ಉಳ್ಳ ಕಾನ್ಷೀರಾಮ್ ಅವರ ಹುಟ್ಟು ಹಬ್ಬವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದ ಮುನಿಯಪ್ಪ ಮಧುಗಿರಿ ತಾಲೂಕಿನಲ್ಲಿ ಬಿಎಸ್ಪಿ ಅಲೆ ಎದ್ದಿದೆ. ಇದಕ್ಕೆ ಕಾನ್ಷೀರಾಮ್ ಹಾಗೂ ಅಕ್ಕ ಮಯಾವತಿ ಆಶೀರ್ವಾದ ಹಾಗೂ ನಮ್ಮೆಲ್ಲರ ಪರಿಶ್ರಮ ಕಾರಣ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ತಾವು ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನೀವೆಲ್ಲ ಸೇರಿ ನನ್ನನ್ನು ಗೆಲ್ಲಿಸಿದರೆ ಇತಿಹಾಸ ಪ್ರಸಿದ್ಧ ಮಧುಗಿರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಪಡಿಸುವ ಜೊತೆಗೆ ಜಿಲ್ಲಾ ಕೇಂದ್ರ, ಪ್ರವಾಸೋಧ್ಯಮ, ಕೈಗಾರಿಕೆ ಕೇಂದ್ರವನ್ನಾಗಿ ರೂಪಿಸಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದಲಿತ ಮುಖಂಡ ಬೆಲ್ಲದಮಡು ಕೃಷ್ಣಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮುನಿಯಪ್ಪ ನೇತೃತ್ವದಲ್ಲಿ ಬಿಎಸ್ಪಿ ಸೇರಿದರು. ತಾ.ಅಧ್ಯಕ್ಷ ಕಣಿಮಯ್ಯ, ಜಿಲ್ಲಾ ಸಂಯೋಜಕ ಶಿವಣ್ಣ, ಉಪಾಧ್ಯಕ್ಷ ಫಣಿರಾಜ್, ಗೋಪಾಲ್ ರೆಡ್ಡಿ, ನಂಜಾರೆಡ್ಡಿ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.