ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಕಿತ್ತಾಟ
ಕ.ಪ್ರ. ವಾರ್ತೆ ್ಣ ಕುಣಿಗಲ್ ್ಣ ಮಾ.21
ಪುರಸಭೆ ಮುಖ್ಯಾಧಿಕಾರಿ ಸ್ಥಾನಕ್ಕೆ ಮೇಲಾಧಿಕಾರಿಗಳ ವಿಭಿನ್ನ ಆದೇಶದಿಂದಾಗಿ, ಇಬ್ಬರು ಅಧಿಕಾರಿಗಳು ಒಂದೇ ಕುರ್ಚಿಗಾಗಿ ಕಿತ್ತಾಡಿ, ಎರಡು ದಿನ ಕಳೆದರೂ, ವಿವಾದ ಬಗೆಹರಿಯದ ಕಾರಣ ತಹಸೀಲ್ದಾರ್ ಮಧ್ಯಪ್ರವೇಶಿಸಿ, ಪುರಸಭೆ ಮುಖ್ಯಾಧಿಕಾರಿಗಳ ಕೊಠಡಿಗೆ ಬೀಗ ಜಡಿದು, ಕಿಲೀಕೈ ತೆಗೆದುಕೊಂಡು ಹೋದ ಘಟನೆ ಗುರುವಾರ ಸಂಜೆ ನಡೆದಿದೆ.
ಪುರಸಭೆ ಮುಖ್ಯಾಧಿಕಾರಿಯಾಗಿ ಸಿ.ಅನ್ನದಾನಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲ ತಿಂಗಳ ಹಿಂದೆ ಇವರನ್ನು ದಿಢೀರ್ ವರ್ಗಾವಣೆ ಮಾಡಿ ಗೋವಿಂದಯ್ಯನವರನ್ನು ಮುಖ್ಯಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆದರೆ, ಅಡಳಿತಾತ್ಮಕ ನ್ಯಾಯಮಂಡಳಿಯಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದ ಅನ್ನದಾನಿ, ಪುನಃ ಮುಖ್ಯಾಧಿಕಾರಿಯಾಗಿ ನಿಯೋಜನೆಗೊಂಡರು. ಈ ಮಧ್ಯೆ ಪುರಸಭಾ ಚುನಾವಣೆಗಳು ಘೋಷಣೆಯಾದವು.
ಪುರಸಭೆ ಚುನಾವಣೆ ಮುಗಿದು ವಿಧಾನಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬುಧವಾರದಂದು, ಕುಣಿಗಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಎಂಎಸ್ ಅಧಿಕಾರಿಯಾದ ಶುಭಾ ಅವರನ್ನು ನಿಯೋಜಿಸಿ ಪೌರಾಡಳಿತ ನಿರ್ದೇಶಕರು ಆದೇಶ ಹೊರಡಿಸಿದ್ದ ಮೇರೆಗೆ, ಬುಧವಾರ ಅಧಿಕಾರ ಸ್ವೀಕರಿಸಲು ಬಂದಾಗ, ಅನ್ನದಾನಿಯವರು ಪೌರಾಡಳಿ ಇಲಾಖೆಯ ಅಧೀನ ಕಾರ್ಯದರ್ಶಿಯವರ ಆದೇಶ ಹಿಡಿದು ತಾವೇ ಮುಖ್ಯಾಧಿಕಾರಿಯಾಗಿ ಮುಂದುವರೆಯುವ ಬಗ್ಗೆ ಪತ್ರ ತೋರಿಸಿದರು. ಈ ಮಧ್ಯ ಶುಭಾ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ಗುರುವಾರ ಸಂಪರ್ಕಿಸಿ, ಇಲಾಖಾ ಅದೇಶದಂತೆ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಲು ಕುಣಿಗಲ್‌ಗೆ ಆಗಮಿಸಿದರು.
ಉಪವಿಭಾಗಾಧಿಕಾರಿಗೆ ಮೊರೆ: ಕಚೇರಿಯಲ್ಲಿದ್ದ ಮುಖ್ಯಾಧಿಕಾರಿ ಅನ್ನದಾನಿಯ ಶುಭಾ ಅವರಿಗೆ, ಅಧಿಕಾರ ಹಸ್ತಾಂತರಿಸುವ ಬಗೆಗೆ ಯಾವುದೇ ನಿಲವು ವ್ಯಕ್ತಪಡಿಸದೆ, ತೆರಳಿದ್ದರಿಂದ ಶುಭಾ ಅವರು, ತಹಸೀಲ್ದಾರ್ ಸೇರಿದಂತೆ ಉಪವಿಭಾಗಾಧಿಕಾರಿಗಳಿಗೆ ಮೊರೆ ಹೋದರು, ಈ ಮಧ್ಯೆ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಆದೇಶವನ್ನು ಫ್ಯಾಕ್ಸ್ ಮೂಲಕ ಕಳಿಸುವುದಾಗಿ ತಿಳಿಸಿದರೆನ್ನಲಾಗಿದ್ದು, ಫ್ಯಾಕ್ಸ್ ಆದೇಶ ಪಡೆಯಲು ತಹಸೀಲ್ದಾರ್ ಜಗದೀಶ್, ಪುರಸಭಾ ಕಾರ್ಯಲಯಕ್ಕೆ ಆಗಮಿಸಿ ಕಾಯುತ್ತಾ ಕುಳಿತರು.
ಸಂಜೆ ಬಹಳ ಹೊತ್ತಾದರೂ, ಯಾವುದೇ ಫ್ಯಾಕ್ಸ್ ಬಾರದಿದ್ದರಿಂದ ಮತ್ತು ಜಿಲ್ಲಾಧಿಕಾರಿಗಳಿಂದ ಯಾವುದೇ ಸ್ಪಷ್ಟ ಆದೇಶ ದೊರಕದ ಹಿನ್ನೆಲೆಯಲ್ಲಿ, ಪುರಸಭೆ ಮುಖ್ಯಾಧಿಕಾರಿಯಾಗಿ ಯಾರನ್ನು ಮುಂದುವರೆಸುವ ಗೊಂದಲ ಉಂಟಾದ ಕಾರಣ, ತಹಸೀಲ್ದಾರ್ ಜಗದೀಶ್, ಮುಖ್ಯಾಧಿಕಾರಿಗಳ ಕೊಠಡಿಗೆ ಹೊಸದೊಂದು ಬೀಗ ತರಿಸಿ, ಗೊಂದಲ ಬಗೆಹರಿಸುವ ತನಕ, ಬೀಗ ಹಾಕಿಸಿ, ತಾವೇ ಕಿಲಿಕೈ ತೆಗೆದುಕೊಂಡು ಹೊರಟರು. ಈ ಹಿಂದೆ ಮುಖ್ಯಾಧಿಕಾರಿ ಅನ್ನದಾನಿ, ಕೆಎಟಿಯಲ್ಲಿ ತಮ್ಮನ್ನು ಮುಂದುವರೆಸುವಂತೆ ಹೋಗಿದ್ದ ತಡೆಯಾಜ್ಞೆಯ ಪ್ರಕರಣದಲ್ಲಿ, ಕೆಎಟಿ ಆದೇಶದಂತೆ ಬೇರೊಂದು ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ಅನ್ನದಾನಿಯವರನ್ನು ಪೌರಾಡಳಿತ ಇಲಾಖೆಗೆ ಪಡೆಯಲಾಗಿದ್ದು, ಈಗ ಅವರನ್ನು ಚಿತ್ರದುರ್ಗಕ್ಕೆ ಮಾತೃಇಲಾಖೆಗೆ ವರ್ಗಾವಣೆಗೊಳಿಸಿ, ಆದೇಶ ನೀಡಲಾಗಿದೆ ಎಂದು ಪುರಸಭೆ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳು ಅಧಿಕಾರ ಹಿಡಿಯಲು ಪರದಾಡುವಂತಾಗಿದೆ. ಶುಕ್ರವಾರ ಜಿಲ್ಲಾಧಿಕಾರಿಗಳು ಕೈಗೊಳ್ಳುವ ತೀರ್ಮಾನ ಮೇಲೆ ಗೊಂದಲದ ಪರಿಸ್ಥಿತಿ ತಿಳಿಗೊಳ್ಳಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.