ದೊಡ್ಡಹಳ್ಳಿ ಗ್ರಾಮಕ್ಕೆ ವಾಜಪೇಯಿ ವಸತಿ ಶಾಲೆ ಮಂಜೂರು
ಪಾವಗಡ: ಸುಮಾರು 10ಕೋಟಿ ವೆಚ್ಚದ ವಾಜಪೇಯಿ ವಸತಿ ಶಾಲೆ ದೊಡ್ಡಹಳ್ಳಿ ಗ್ರಾಮಕ್ಕೆ ಮಂಜೂರಾಗಿರುವುದಾಗಿ ಜೆಡಿಎಸ್ ಹಿರಿಯ ಮುಖಂಡ ಹಾಗೂ ಎಪಿಎಂಸಿ ನಿರ್ದೇಶಕ ಭೀಮನಕುಂಟೆ ಸತ್ಯಪ್ಪ ತಿಳಿಸಿದರು.
ಅವರು ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸದಾ ಬರಕ್ಕೆ ತುತ್ತಾಗಿರುವ ಪಾವಗಡ ತಾಲೂಕು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು ವಿದ್ಯಾಭ್ಯಾಸ ಮಾಡುವ ಸಲುವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗಡಿ ಭಾಗದ ಬಡ ಮಕ್ಕಳ ಉತ್ತಮ ವಿದ್ಯಾಭ್ಯಾಸ ರೂಪಿಸುವ ಹಿನ್ನೆಲೆಯಲ್ಲಿ ಮುಖಂಡ ಹಾಗೂ ನಿವೃತ್ತ ಜಿಲ್ಲಾಧಿಕಾರಿ ದೊಡ್ಡಹಳ್ಳಿ ರಾಮಾಂಜನಪ್ಪ ಸರ್ಕಾರದ ಜೊತೆ ಪ್ರಸ್ತಾವಿಸಿ 10ಕೋಟಿ ವೆಚ್ಚದ ವಾಜಪೇಯಿ ವಸತಿ ಶಾಲೆ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು. ತಾಲೂಕಿನ ಜನತೆ ಪರವಾಗಿ ಸತ್ಯಪ್ಪ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ವಾಜಪೇಯಿ ವಸತಿ ಶಾಲೆ ನಿರ್ಮಿಸಲು ದೊಡ್ಡಹಳ್ಳಿ ಗ್ರಾಮದಲ್ಲಿ ತಮ್ಮ ಹೆಸರಿನಲ್ಲಿ ಇರುವ 10ಎಕರೆ ಜಮೀನು ಉಚಿತವಾಗಿ ನೀಡಿದ್ದು ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢಶಾಲೆಯವರೆಗೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ವಸತಿ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಇಲ್ಲಿ ಸರ್ಕಾರ ಕಲ್ಪಿಸಿದೆ ಎಂದರು.
ಈ ಹಿಂದೆ ಇದೇ ರಾಮಾಂಜಿನಪ್ಪ ದೊಡ್ಡಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ 5 ಎಕರೆ, ಪಶು ವೈದ್ಯ ಶಾಲೆಗೆ 2ಎಕರೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ 3ಎಕರೆ ಜಮೀನು ಉಚಿತವಾಗಿ ನೀಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿರುವುದನ್ನು ಅವರು ಸ್ಮರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.