ಪರಿಸರದ ಕೊಡುಗೆಯಾದ ನೆಲ, ಜಲ ಮಾರಾಟದ ಸರಕಾಗಿವೆ: ಡಾ. ವೆಂಕಟೇಶ್
ಕ.ಪ್ರ. ವಾರ್ತೆ ್ಣ ತಿಪಟೂರು ್ಣ ಮಾ.21
ಪರಿಸರದ ಕೊಡುಗೆಯಾಗಿರುವ ನೆಲ ಮತ್ತು ಜಲ ಮಾರಾಟದ ಸರಕಾಗಿದ್ದು, ನಾಗರೀಕರಣದ ಪ್ರಾಬಲ್ಯದಿಂದ ಇವುಗಳನ್ನು ನಮ್ಮಲ್ಲೇ ಕೊಂಡು ನಮಗೇ ಮಾರುವ ದಿನಗಳು ಸಮೀಪಿಸುತ್ತಿವೆ ಎಂದು ಉಪನ್ಯಾಸಕ ಡಾ. ಎಲ್.ಎಂ. ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೋಟೆನಾಯಕನಹಳ್ಳಿ ಮತ್ತು ಹುಚ್ಚಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಮೊದಲನೆ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ನಗರ ಪ್ರದೇಶಗಳ ಸೆರಗಿಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ನಾಳೆ ಅವುಗಳನ್ನು ಮತ್ತೆ ನಮಗೆ ಮಾರುವ ದಿನಗಳು ಸಮೀಸುತ್ತಿವೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಅರಿವು ಗ್ರಾಮೀಣರಿಗೆ ಅವಶ್ಯಕವಾಗಿದೆ. ಗ್ರಾಮೀಣ ಯುವಜನತೆ ಕೈಗಾರೀಕರಣದ ಮೋಡಿಗೆ ಒಳಗಾಗಿ ಕಾಂಕ್ರಿಟ್ ನಗರಗಳತ್ತ ವಲಸೆ ಹೋಗುತ್ತಿದ್ದು, ಇದರಿಂದ ಗ್ರಾಮೀಣರ ಏಳಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಪ್ರಮುಖ ಪಾತ್ರ: ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಂಗ್ಲವಿಭಾಗದ ಮುಖ್ಯಸ್ಥರಾದ ಜ್ಯೋತಿ ಮಾತನಾಡಿ ಬದ್ಧತೆ, ಪ್ರಮಾಣಿಕತೆ ಹಾಗೂ ಶಿಸ್ತು ಸ್ವಯಂಸೇವಕರಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂದಿನ ಆಧುನಿಕ ಜೀವನಕ್ಕೆ ಮಾರುಹೋಗದೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಶಿಬಿರಾಧಿಕಾರಿ ಡಾ.ಡಿ.ಆರ್. ಹೊನ್ನಾಂಜಿನಯ್ಯ ಮಾತನಾಡಿ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಆಧುನಿಕ ಯುಗದಲ್ಲಿ ಎನ್‌ಎಸ್‌ಎಸ್ ಅನಿವಾರ್ಯವಾಗಿದ್ದು ದಾರಿ ತಪ್ಪುತ್ತಿರುವ ಯುವಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣರಿಗೆ ಇಂತಹ ಶಿಬಿರಗಳಿಂದ ಸಾಕಷ್ಟು ವಿಚಾರ ವಿನಿಮಯ, ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ತಿಳಿದುಕೊಳ್ಳುವ ಅವಕಾಶವಿದ್ದು,ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜು ಪೋಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಬಲ್ಲೇಮನೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ನಾಗರಾಜು, ಜ್ಯೋತಿಕಿರಣ್, ನೀಲಕಂಠಸ್ವಾಮಿ, ಕಾಂತರಾಜು, ಯಶೋಧ, ನರ್ಮದಾ ಮತ್ತಿತರರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.