ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಸಮಾಲೋಚನಾ ಕೇಂದ್ರಗಳಲ್ಲಿ ಇತ್ಯರ್ಥವಾಗಲಿ'

Parashurama
Updated On : 25 Mar 2013, 10:28 am

ತುಮಕೂರು: ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಸಾಧ್ಯವಾದಷ್ಟು ಮಟ್ಟಿಗೆ ಸಾಂತ್ವನ ಕೇಂದ್ರಗಳಂತಹ ಸಮಾಲೋಚನಾ ಕೇಂದ್ರಗಳಲ್ಲಿ ಇತ್ಯರ್ಥವಾಗುವುದು ಸೂಕ್ತ ಎಂದು ಇಲ್ಲಿನ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶ ಎಚ್.ಎಂ. ದೇವರಾಜ್ ಸಲಹೆ ನೀಡಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಮಹಿಳಾ ಕಾನೂನುಗಳ ತರಬೇತಿ ಕಾರ್ಯಾಗಾರದ ಗೋಷ್ಠಿಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಕೌಟುಂಬಿಕ ದೌರ್ಜನ್ಯಗಳ ನಿಯಂತ್ರಣಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳು, ಕಾನೂನುಗಳನ್ನು ರೂಪಿಸಿದೆ. ಕಾನೂನಿನ ಅಸ್ತ್ರ ಉಪಯೋಗಿಸುವುದಕ್ಕೂ ಮೊದಲು ಸಮಾಲೋಚನೆಯ ಮೂಲಕ ಕೌಟುಂಬಿಕ ಪ್ರಕರಣಗಳು ಬಗೆಹರಿಯುವಂತಾಗಬೇಕು ಎಂದರು.
ಸಹಕಾರಿ: ಎಲ್ಲಾ ಕುಟುಂಬಗಳಲ್ಲಿಯೂ ಸಣ್ಣಪುಟ್ಟ ವಿಚಾರವಾಗಿ ಗಲಾಟೆಗಳು ನಡೆದೇ ಇರುತ್ತವೆ. ಆದರೆ ಎಲ್ಲವೂ ಬಹಿರಂಗವಾಗುವುದಿಲ್ಲ ಎಂದರು. ಸಮಾಲೋಚನೆಯ ಮೂಲಕ ಸಮಸ್ಯೆಗಳು ಬಗೆಹರಿದಾಗ ಉಭಯ ಪಕ್ಷಗಾರರಲ್ಲಿ ನೆಮ್ಮದಿಯ ವಾತಾವರಣ ಮೂಡಲು ಸಹಕಾರಿಯಾಗುತ್ತದೆ ಎಂದರು.
ಕುಟುಂಬದಲ್ಲಾಗುವ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ 2005 ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಸಂರಕ್ಷಣಾಧಿಕಾರಿಗಳು, ಸೇವಾ ಸರಬರಾಜುದಾರರು ಎಂದು ಗುರುತಿಸಲಾಗಿದ್ದು ನೊಂದ ಮಹಿಳೆಯರು ಅವರ ಸಹಕಾರ ಪಡೆದು ಕಾನೂನಿನ ಮೂಲಕ ಹೋರಾಟ ನಡೆಸಬಹುದಾಗಿದೆ ಎಂದರು.
ಹಕ್ಕುದಾರಳು: ಮಹಿಳೆಯರಿಗೆ ಆಸ್ತಿಯ ಹಕ್ಕು ಕುರಿತು ವಿಷಯ ಮಂಡಿಸಿದ ವಕೀಲ ಕೆ.ಎಸ್. ಜಗನ್ನಾಥ್ ಅವರು 1956 ರ ಕಾಯ್ದೆ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ದೊರೆಯುವಂತಾಗಬೇಕು. ಆನಂತರ 1994 ಹಾಗೂ 2005 ರಲ್ಲಿ ಇದಕ್ಕೆ ಒಂದು ಸ್ಪಷ್ಟ ರೂಪು ದೊರೆತು ಈ ಕಾಯ್ದೆಯಂತೆ ಮಹಿಳೆಯರು ಗಂಡು ಮಕ್ಕಳಂತೆಯೇ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುದಾರಳಾಗಿದ್ದಾಳೆ ಎಂದರು.
ಆದರೆ ಪ್ರತಿಯೊಂದು ಹಕ್ಕು ಚಲಾವಣೆ ಮಾಡಲು ಕಾಲ ಪರಿಮಿತಿಯ ನಿಬಂಧನೆ ಇದ್ದು ಇದನ್ನು ಅರಿತಿರಬೇಕು. ಕಾಲ ಮೀರಿ ಹೋದಾಗ ಕಾನೂನಿನ ಮೊರೆ ಹೋದರೆ ಕಾನೂನು ನಮ್ಮ ಸಹಾಯಕ್ಕೆ ಬರುವುದಿಲ್ಲ ಎಂದರು. ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಮಾತನಾಡಿದ ವಕೀಲ ಸಾ.ಚಿ. ರಾಜಕುಮಾರ್ ಮಾತನಾಡಿ 1961 ರಲ್ಲಿ ಈ ಕಾಯ್ದೆ ಜಾರಿಯಾಯಿತು.
 1986 ರಲ್ಲಿ ತಿದ್ದುಪಡಿಯಾಗಿ ವಿವಾಹವಾಗಿ 7 ವರ್ಷದೊಳಗೆ ಮಹಿಳೆ ನಿಧನ ಹೊಂದಿದರೆ ವರದಕ್ಷಿಣೆ ಸಾವು ಎಂದು ನಿರೂಪಿಸುವ ಅವಕಾಶವನ್ನು ಸಹ ಕಲ್ಪಿಸಲಾಯಿತು. ಇಷ್ಟೆಲ್ಲಾ ಇದ್ದರೂ ಈ ಸಮಸ್ಯೆ ಸಮಾಜದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ. ಕಾನೂನು ಇದೆ. ಭಾಷಣಕಾರರೂ ಇದ್ದಾರೆ. ಆದರೆ ಅದರ ಅನುಷ್ಠಾನದಲ್ಲಿ ಮಾತ್ರ ಎಲ್ಲರೂ ಹಿಂದೇಟು ಹಾಕುತ್ತಿರುವುದರಿಂದ ಈ ಸಮಸ್ಯೆ ಹೆಮ್ಮರವಾಗಲು ಕಾರಣವಾಗುತ್ತಿದೆ ಎಂದರು. ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಮಹೇಶ್, ಜಿಲ್ಲಾಸ್ಪತ್ರೆ ಎಆರ್‌ಟಿ ಸೆಂಟರ್‌ನ ವೈದ್ಯಾಧಿಕಾರಿ ಡಾ. ಡಿ. ಶಂಕರ್, ಎಸ್. ನಟರಾಜ್ ಸ್ವಾಗತಿಸಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments