ಚುನಾವಣಾ ಅಖಾಡಕ್ಕಿಳಿಯಲು ತಾಪಂ ಅಧ್ಯಕ್ಷ ರಮೇಶ್ಗೌಡರಿಗೆ ಹೆಚ್ಚಿದ ಒತ್ತಡ
ಕ.ಪ್ರ. ವಾರ್ತೆ ತುರುವೇಕೆರೆ ಮಾ.25
ದಬ್ಬೇಘಟ್ಟ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದು ಹಾಲಿ ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿರುವ ಎಂ.ಡಿ.ರಮೇಶ್ ಗೌಡರವರನ್ನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ತಾಲೂಕು ಪಂಚಾಯ್ತಿಯ ಅಧ್ಯಕ್ಷ ಗಾದಿ ಪಕ್ಷದ ಒಡಂಬಡಿಕೆಯನ್ವಯ ಇನ್ನೆರಡು ದಿನಗಳಲ್ಲಿ ಕೊನೆಗೊಳ್ಳಲಿದೆ. ಈ ಮಧ್ಯೆ ಅವರ ಅಭಿಮಾನಿಗಳು ರಮೇಶ್ ಗೌಡರನ್ನು ಯಾವುದಾದರೂ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುವಂತೆ ಒತ್ತಡ ತಂದಿದ್ದಾರೆ. ಆದರೆ ರಮೇಶ್ ಗೌಡರು ಜೆಡಿಎಸ್ ಪಕ್ಷದ ವತಿಯಿಂದ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದರಿಂದ ತಾವು ಸ್ವತಂತ್ರವಾಗಿ ಅಥವಾ ಇತರೆ ಯಾವುದಾದರೂ ಪಕ್ಷದಿಂದ ಸ್ಪರ್ಧೆಗೆ ಇಳಿದರೆ ಪಕ್ಷಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ತಾಲೂಕಿನಲ್ಲಿ ಇತ್ತೀಚೆಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಹಾಗೂ ಜೆಡಿಎಸ್ ಮುಖಂಡರಾದ ಬಿ.ಕೆ.ಸೋಮಣ್ಣ ನವರ ನಡುವೆ ನಡೆದ ಗಲಭೆ ಪ್ರಕರಣದಿಂದ ಪಕ್ಷಕ್ಕೆ ಹಾನಿಯಾಗಿದೆ. ಪ್ರಕರಣದಲ್ಲಿ ಪೊಲೀಸ್ರಿಂದ ಬಂಧಿಯಾಗಿದ್ದ ಸೋಮಣ್ಣನವರಿಗೆ ಇನ್ನೂ ಬಿಡುಗಡೆಯ ಭಾಗ್ಯ ದೊರೆತಿಲ್ಲ.
ಸೋಮಣ್ಣನವರು ಬಿಡುಗಡೆಯ ನಂತರ ತೆಗೆದುಕೊಳ್ಳುವ ನಿಲವು ಏನು ಎಂಬುದು ನಿಗೂಢವಾಗಿದೆ. ಈರ್ವರ ನಡುವಿನ ಶೀಥಲ ಸಮರದಲ್ಲಿ ಜೆಡಿಎಸ್ಗೆ ಮುಂದಿನ ಚುನಾವಣೆಯಲ್ಲಿ ತೊಂದರೆಯಾಗಬಹುದು. ಆದ್ದರಿಂದ ರಮೇಶ್ ಗೌಡರಿಗೇ ಟಿಕೆಟ್ ನೀಡಿ ಎಂದು ಆಗ್ರಹಿಸಿ ದಬ್ಬೇಘಟ್ಟದ ಹಲವಾರು ಜೆಡಿಎಸ್ ಮುಖಂಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಗೊಂದಲ: ದಬ್ಬೇಘಟ್ಟ ಹೋಬಳಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮಗಳಲ್ಲಿ ಸ್ವತಃ ಕುಮಾರಸ್ವಾಮಿಯವರೇ ಎಂ.ಟಿ.ಕೃಷ್ಣಪ್ಪನವರೇ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ತದ ನಂತರದ ಬೆಳೆವಳಿಗೆಯಲ್ಲಿ ಕೆಲವು ಗೊಂದಲಗಳಾಗಿದ್ದು ಹಲವಾರು ಊಹಾಪೋಹಗಳಿಗೆ ಅವಕಾಶವಾಗಿದೆ. ಅಲ್ಲದೇ ಪಕ್ಕದ ಕುಣಿಗಲ್ ನ ಡಿ.ನಾಗರಾಜಯ್ಯ ಹಾಗೂ ಜೆಡಿಎಸ್ನ ಜಿಲ್ಲಾ ಅಧ್ಯಕ್ಷರಾಗಿದ್ದ ನಿಂಗಪ್ಪನವರಿಗೆ ಕೈ ಕೊಟ್ಟಿರುವ ಪ್ರಕರಣಗಳು ಗೊಂದಲಕ್ಕೆ ಅವಕಾಶವಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಕುಮಾರಸ್ವಾಮಿಯವರು ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಸ್ಪಷ್ಟವಾಗಿ ಏನನ್ನೂ ಹೇಳದಿರುವುದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ.
ಎಂ.ಟಿ.ಕೆಗೇ ಟಿಕೆಟ್: ತಾಲೂಕಿನ ಜೆಡಿಎಸ್ನಲ್ಲಿ ಯಾವುದೇ ಗೊಂದಲಗಳಿಲ್ಲ. ಶಾಸಕ ಎಂ.ಟಿ.ಕೃಷ್ಣಪ್ಪನವರಿಗೇ ಟಿಕೆಟ್ ನೀಡುವುದು ಸೂಕ್ತ. ಕೃಷ್ಣಪ್ಪನವರು ಪಕ್ಷದ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ತಾಲೂಕಿನಲ್ಲಿ ಸದೃಢಗೊಳಿಸಿದ್ದಾರೆ. ಕೃಷ್ಣಪ್ಪನವರನ್ನೇ ಅಭ್ಯರ್ಥಿ ಎಂದು ಕೂಡಲೇ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಗೊಂದಲಗಳಿಗೆ ಇತಿಶ್ರೀ ಹಾಡಬೇಕು ಎಂದು ತಾಲೂಕಿನ ಜೆಡಿಎಸ್ ಮುಖಂಡರಾದ ಜಿಲ್ಲಾ ಪಂಚಾಯ್ತಿಯ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಎ.ಬಿ.ಜಗದೀಶ್, ತಾ.ಪಂ.ಅಧ್ಯಕ್ಷ ಎಂ.ಡಿ.ರಮೇಶ್ ಗೌಡ ಮೊದಲಾದವರು ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.