ಕೃಷ್ಣಪ್ಪನವರಿಗೆ ಟಿಕೆಟ್ ತಪ್ಪಿದರೆ...ಇವರು ರೆಡಿ
ಕ.ಪ್ರ. ವಾರ್ತೆ ತುರುವೇಕೆರೆ ಮಾ.26
ಯಾಕೋ ಇನ್ನು ಜೆಡಿಎಸ್ ಪಕ್ಷ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ.
ಕಳೆದ ತಿಂಗಳು ತಾಲೂಕಿಗೆ ಆಗಮಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡೊಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ತದ ನಂತರದ ಬೆಳೆವಣಿಗೆಗಳು ಏಕೋ ಹಲವಾರು ಅನುಮಾನಗಳಿಗೆ ಆಸ್ಪದ ನೀಡಿದೆ.
ಜೆಡಿಎಸ್ನ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಕೆ. ಸೋಮಣ್ಣನವರಿಗೂ ಹಾಗೂ ಶಾಸಕರಿಗೂ ಕೆಲ ದಿನಗಳ ಹಿಂದೆಯಷ್ಟೇ ಸಮಾರಂಭವೊಂದರಲ್ಲಿ ಮಾತಿಗೆ ಮಾತಿಗೆ ಬೆಳೆದು ಹೊಡೆದಾಡಿದ ಪ್ರಕರಣವೂ ನಡೆದು ಹೋಗಿದ್ದು ಇತಿಹಾಸ.
ಪುನಃ ಸೆರೆವಾಸ: ಶಾಸಕರ ಮೇಲೆ ಕೈ ಮಾಡಿದ ಹಾಗೂ ಅವರಲ್ಲಿದ್ದ ಹಣ ಹಾಗೂ ಒಡವೆಯನ್ನು ಅಪಹರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದ ಸೋಮಣ್ಣನವರಿಗೆ ಆ ಪ್ರಕರಣ ಸಂಬಂಧ ಜಾಮೀನೇನೋ ಸಿಕ್ಕತ್ತು.
ಆದರೆ ಶಾಸಕರ ನೇತೃತ್ವದಲ್ಲಿ ಈ ಹಿಂದೆ ನಡೆದಿದ್ದ ಹಲವಾರು ಹೋರಾಟ ಪ್ರಕರಣಗಳ ಸಂಬಂಧ ಪೊಲೀಸ್ ಕೇಸ್ ದಾಖಲಾಗಿದ್ದ ಬಿ.ಕೆ.ಸೋಮಣ್ಣರಿಗೆ ಪುನಃ ಜೈಲು ವಾಸವಾಗಿದೆ. ಬುಧವಾರ ನ್ಯಾಯಾಲಯದಲ್ಲಿ ಸೋಮಣ್ಣನವರ ಜಾಮಿನು ವಿಚಾರಮೆಗೆ ಬರಲಿದೆ.
ಈರ್ವರ ಹೊಡೆದಾಟ ಪ್ರಕರಣದಲ್ಲಿ ಶಾಸಕರು ಹಾಗೂ ಸೋಮಣ್ಣನವರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿ ರಾಜಿ ಮಾಡಲು ಸ್ವತಃ ಕುಮಾರಸ್ವಾಮಿಯವರೇ ಮುಂದಾಗಿದ್ದರು. ಅದರಲ್ಲಿ ಹಿನ್ನೆಡೆಯಾಗಿತ್ತು. ಹಾಗೂ ಈ ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಹೈಕಮಾಂಡ್ ವಿರುದ್ಧ ಶಾಸಕರು ಸಿಡಿದೆದ್ದಿದ್ದರು ಎಂಬ ಕಾರಣವೂ ಕುಮಾರಸ್ವಾಮಿಯವರು ಸ್ಷಷ್ಟ ಆದೇಶ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.
ಅನುಮಾನ: ಇಂದಲ್ಲಾ ನಾಳೆ ಎಂ.ಟಿ.ಕೃಷ್ಣಪ್ಪನವರನ್ನೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಬಹುದು. ಆದರೂ ಸಹ ಕುಣಿಗಲ್ ನಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ನವರಿಗೆ ಮಾಡಿದ ರೀತಿ ಇವರಿಗೂ ಆಗುವುದೇನೋ ಎಂಬ ಅನುಮಾನ ಭಾರಿ ಚಿಂತೆಗೀಡು ಮಾಡಿದೆ. ಇದುವರೆಗೂ ಕುಮಾರಸ್ವಾಮಿಯವರು ರಾಜ್ಯದ ಯುವುದೇ ಅಭ್ಯರ್ಥಿಯ ಹೆಸರನ್ನು ಪ್ರಕಟ ಮಾಡಿಲ್ಲ. ಆದರೂ ಸಹ ಹೈಕಮಾಂಡ್ನಲ್ಲಿ ನಡೆಯುತ್ತಿರುವ ಹಲವಾರು ಚರ್ಚೆಗಳು ಟಿಕೆಟ್ ಬಗ್ಗೆ ಅನುಮಾನಗಳು ಕಾಡಲು ಶುರುವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.