ಗೆಲವಿಗಾಗಿ ಕೆಜೆಪಿ- ಕಾಂಗ್ರೆಸ್ ನೇರ ಪೈಪೋಟಿ
ಕ.ಪ್ರ. ವಾರ್ತೆ ತಿಪಟೂರು ಮಾ.26
ತಾಲೂಕಿನ ಈಗಿನ ರಾಜಕೀಯ ವಾತಾವರಣ ಇದುವರೆಗೂ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳಿಗಿಂತ ವಿಭಿನ್ನವಾಗಿ ಕಾಣುತ್ತಿದೆ. ಪ್ರತಿ ಬಾರಿಯ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಂಭವ ಹೆಚ್ಚಾಗಿದ್ದರೂ, ನಾನಾ ಕಾರಣಗಳಿಂದ ಅಂತಿಮವಾಗಿ ಕೆಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಸದ್ಯಕ್ಕೆ ಕ್ಷೇತ್ರದಲ್ಲಿ ಜೆಡಿಎಸ್ ಹೊರತಾಗಿ ಇತರ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾರ್ಯಕರ್ತರುಗಳಿಗೆ ಹೇಳಿಕೊಳ್ಳುವಂತಹ ಗೊಂದಲವಿಲ್ಲ.
ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷದ ಅಭ್ಯರ್ಥಿ ಬಗ್ಗೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಏಕೆಂದರೆ ಕಳೆದ 3-4ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್ ಸಂಘಟನೆಯಲ್ಲಿ ತೊಡಗಿರುವ ಜಕ್ಕನಹಳ್ಳಿ ಲಿಂಗರಾಜು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬೆಂಗಳೂರು ಮೂಲದ ವ್ಯಕ್ತಿ ಮೈಲಾರಪ್ಪ ಎಂಬುವವರು ತಾಲೂಕಿನಲ್ಲಿ ಬೀಡು ಬಿಟ್ಟು ಪಕ್ಷದ ಸಂಘಟನೆಯಲ್ಲಿ ಜಕ್ಕನಹಳ್ಳಿ ಲಿಂಗರಾಜುಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಇವರಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಲ್. ಜಗದೀಶ್, ಜಿ.ಪಂ. ಮಾಜಿ ಅಧ್ಯಕ್ಷ ಆನಂದರವಿಯವರು ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ತಾಲೂಕು ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ, ಮಹಾಪ್ರಧಾನ ಕಾರ್ಯದರ್ಶಿ ಹಿಂಡಿಸ್ಕೆರೆ ಶಿವಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ರೇಣುಕಾರ್ಯ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳಿದ್ದರೂ ಅಂತಿಮವಾಗಿ ಲಿಂಗರಾಜು-ಮೈಲಾರಿ ನಡುವೆ ಬಿ ಫಾರಂಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಅಭ್ಯರ್ಥಿ ಯಾರೆಂಬುದು ಮಾತ್ರ ಬಹುತೇಕ ಯಕ್ಷ ಪ್ರಶ್ನೆಯಾಗಿದೇ ಉಳಿದಿದೆ. ಲಿಂಗರಾಜುವಿಗೆ ಟಿಕೆಟ್ ಎಂಬುದು ಮೇಲ್ನೋಟಕ್ಕೆ ಕಾಣಬರುತ್ತಿದ್ದು, ಪ್ರಚಾರಕ್ಕೂ ಇಳಿದಿದ್ದಾರೆ.
ಬಿಜೆಪಿ ಡಲ್: ತಾಲೂಕಿನಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಿ.ಸಿ.ನಾಗೇಶ್ಗೆ ಮತ್ತೊಮ್ಮೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ. ಕಳೆದ ಬಾರಿ ಯಡಿಯೂರಪ್ಪನವರ ಅಲೆಯೇ ಅವರನ್ನು ಗೆಲ್ಲಿಸಿತ್ತೆಂಬುದು ಮನೆ ಮಾತಾಗಿದೆ. ಯಡಿಯೂರಪ್ಪ ಅಲೆಯಲ್ಲಿ ತೇಲಿಬಂದ ನಾಗೇಶ್ ನಂತರದ ಬೆಳವಣಿಗೆಗಳಲ್ಲಿ ಯಡಿಯೂರಪ್ಪನವರಿಂದ ಹೀಂದೆ ಸರಿದರು. ಅನಂತಕುಮಾರ್ ಬಣಕ್ಕೆ ಜೈ ಜೈ ಅಂದರೆಂಬ ಆಕ್ರೋಶಕ್ಕೆ ಬಿಜೆಪಿ ಮುಖಂಡರು ಈಗಾಗಲೆ ಕೆಜೆಪಿ ಸೇರಿದ್ದು, ಇದರ ಪ್ರಭಾವವನ್ನು ಮೊನ್ನಿನ ನಗರಸಭಾ ಚುನಾವಣೆಯಲ್ಲಿ ಕೆಜೆಪಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಸಾಬೀತಾಗಿದೆ. ಆದರೂ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬಿಜೆಪಿ ತಯಾರಾಗಿದೆ.
ಅನುಕಂಪದಲ್ಲಿ ಕಾಂಗ್ರೆಸ್: ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ. ಷಡಕ್ಷರಿಯವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕೆ.ಷಡಕ್ಷರಿ ಹಾಗೂ ನಗರಸಭಾ ಸದಸ್ಯ ತರಕಾರಿ ನಾಗರಾಜು, ಗುಂಗರಮೆಳೆ ವೆಂಕಟೇಶ್ ನಡುವ ಪೈಪೋಟಿ ಇದೆ. ಕೆ.ಷಡಕ್ಷರಿಯವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕೆಜೆಪಿ ಪ್ರಾಬಲ್ಯ : ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಬೆಂಗಳೂರಿನಲ್ಲಿ ಎಸಿಪಿ (ವಿಧಾನಸೌಧ ಭದ್ರತೆ) ಯಾಗಿದ್ದ ಲೋಕೇಶ್ವರ ಸ್ವಯಂ ನಿವೃತ್ತಿ ಪಡೆದು ಸ್ಪರ್ಧಿಸುತ್ತಿದ್ದಾರೆ. ಯಡಿಯೂರಪ್ಪನವರ ಅಲೆಯಿಂದಲೆ ಗೆಲವು ಸಾಧಿಸಲು ಹೊರಟಿರುವ ಲೋಕೇಶ್ವರ ತಾಲೂಕಿನಲ್ಲಿ ಬಹಳ ಹಿಂದಿನಿಂದಲೂ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರು ನಿತ್ಯವೂ ಕೆಜೆಪಿ ಸೇರುತ್ತಿರುವುದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಕೆಜೆಪಿ ಮತ್ತಷ್ಟು ಗಟ್ಟಿಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಇವೆಲ್ಲಾ ಅನುಕೂಲತೆಗಳ ಜೊತೆಗೆ ಜನಾನುರಾಗಿ, ಕೊಬ್ಬರಿ ಕಿಂಗ್ ಎಂದೇ ಪ್ರಸಿದ್ಧಿಯಾಗಿರುವ ಮಾಜಿ ಶಾಸಕ ಬಿ. ನಂಜಾಮರಿಯವರು ಕೆಜೆಪಿಗೆ ಸಾಥ್ ನೀಡಿದ್ದು, ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಗೆಲವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದೂ ಕೆಜೆಪಿಗೆ ಆನೆ ಬಲ ಬಂದಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.