ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಧಿಕಾರ ಮದ
ಕನ್ನಡಪ್ರಭ ವಾರ್ತೆ ತುರುವೇಕೆರೆ ಮಾ, 26
ಬಿಜೆಪಿ ರಾಜ್ಯಾಧ್ಯರಾಗಿ ಇನ್ನೂ ಕೇವಲ ಮೂರು ದಿನವಾಗಿಲ್ಲ. ಆಗಲೇ ಪ್ರಹ್ಲಾದ್ ಜೋಶಿಯವರ ನಾಲಿಗೆ ಬಹಳ ಬೆಳೆದಿದೆ. ಜೋಶಿಯವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಹಾಗಾಗಿ ನಾಲಿಗೆ ಹೋದಂತೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಧಟತನದಿಂದ ಮಾತನಾಡದೇ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ. ನಾಲಿಗೆ ಹರಿಯ ಬಿಡುವುದು ಒಳ್ಳೆಯದಲ್ಲ. ಹೀಗೆಂದು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದವರು ರಾಜ್ಯ ಕೆಜೆಪಿಯ ವರಿಷ್ಠ ಬಿ.ಎಸ್.ಯಡಿಯೂರಪ್ಪ.
ಪಟ್ಟಣದ ವಿರಕ್ತ ಮಠದ ಪ್ರಾಂಗಣದಲ್ಲಿ ಕೆಜೆಪಿ ವತಿಯಿಂದ ಆಯೋಜಿಸಲಾಗಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯ ಅಭಿವೃಧ್ಧಿಗಾಗಿ ಪ್ರಾಮಾಣಿಕವಾಗಿ ದುಡಿದೆ. ಆದರೆ ತಮ್ಮ ಅಭಿವೃಧ್ಧಿ ಸಹಿಸದ ಮಂದಿ ನನ್ನನ್ನು ತುಳಿದರು. ಆದರೆ ರಾಜ್ಯದ ಜನತೆ ತಮ್ಮನ್ನು ಬೆನ್ನು ತಟ್ಟಿದರು ಎಂದರು. ಪ್ರಾದೇಶಿಕ ಪಕ್ಷಗಳಿಂದಲೇ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದನ್ನು ದೇಶದ ಹಲವಾರು ರಾಜ್ಯಗಳು ಸಾದರಪಡಿಸಿವೆ. ಕೇಂದ್ರದ ಸರ್ಕಾರಗಳು ಪ್ರಾದೇಶಿಕ ಪಕ್ಷಗಳ ಮರ್ಜಿಯಲ್ಲೇ ಕರ್ತವ್ಯ ನಿರ್ವಹಿಸುತ್ತವೆ. ರಾಜ್ಯದ ಸರ್ವಾಗೀಣ ಅಭಿವೃಧ್ಧಿ ಪ್ರಾದೇಶಿಕ ಪಕ್ಷಗಳಿಂದ ಸಾಧ್ಯ ಎಂಬುದಕ್ಕೆ ಆಂಧ್ರ ಪ್ರದೇಶ, ತಮಿಳುನಾಡು ಸಾಕ್ಷಿಯಾಗಿದೆ. ಸಂಸತ್ತಿನಲ್ಲಿ ಸುಮಾರು 224 ಮಂದಿ ಪ್ರಾದೇಶಿಕ ಪಕ್ಷಗಳ ಸಂಸತ್ ಸದಸ್ಯರಿದ್ದಾರೆ. ದೇಶದಲ್ಲಿ 2882 ಮಂದಿ ವಿವಿಧ ಪ್ರಾದೇಶಿಕ ಪಕ್ಷಗಳ ಶಾಸಕರು ಇದ್ದಾರೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿ ಪ್ರಾದೇಶಕ ಪಕ್ಷಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಪ್ರಚಾರ ಮಾಡಿ: ಯಡಿಯೂರಪ್ಪ ಅಂದರೆ ಕಮಲದ ಗುರುತು ಎಂಬುದು ಸಾಮಾನ್ಯವಾಗಿದೆ. ಆದರೆ ಕೆಜೆಪಿಯದು ಸರ್ವ ಸದುದ್ದೇಶಗಳಿಗೆ ಬಳಕೆಯಾಗುವ ತೆಂಗಿನ ಕಾಯಿ ಎಂಬುದನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದರು. ತಮ್ಮ ಪಕ್ಷ ನಿರೀಕ್ಷೆ ಮೀರಿ ರಾಜ್ಯಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವುದನ್ನು ಕಂಡು ಹೊಟ್ಟೆ ಉರಿಯಿಂದ ಬಹುತೇಕರು ಟೀಕೆಯ ಸುರಿಮಳೆ ಮಾಡುತ್ತಿದ್ದಾರೆ. ಅದ್ಯಾವುದಕ್ಕೂ ಕಿವಿಗೊಡದೇ ತಾವು ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಯಡಿಯೂರಪ್ಪ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್, ತುಮಕೂರು ಗ್ರಾಮಾಂತರ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿರುವ ಜೆಡಿಎಸ್ನಿಂದ ಕೆಜೆಪಿಗೆ ಸೇರಿದ ಎಚ್.ನಿಂಗಪ್ಪ, ತಿಪಟೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲೋಕೇಶ್ವರ್, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಸಾಲಾ ಜಯರಾಂ ಮಾತನಾಡಿದರು.
ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಕೆ ಜೆ ಪಿ ಅಧ್ಯಕ್ಷ ಹೆಬ್ಬಾಕ ರವಿ ಮೊದಲಾದ ಮುಖಂಡರು ಉಪಸ್ಥಿತರಿದ್ದರು. ವಿಧಾನ ಸಭಾ ಕ್ಷೇತ್ರದ ಬಾಣಸಂದ್ರದಿಂದ ಬೃಹತ್ ಪ್ರಮಾಣದಲ್ಲಿ ಬೈಕ್ ರ್ಯಾಲಿ ಮೂಲಕ ಯಡಿಯೂರಪ್ಪನವರನ್ನು ಕರೆ ತರಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.