'ಮುಸ್ಲಿಮರನ್ನು ಗ್ಯಾರೇಜ್ಗೆ ಸೀಮಿತಗೊಳಿಸಿದ ಕಾಂಗ್ರೆಸ್'
ಕನ್ನಡಪ್ರಭ ವಾರ್ತೆ ತುಮಕೂರು ಮಾ.26
ಮುಸಲ್ಮಾನರನ್ನು ಸೈಕಲ್ಷಾಪ್, ಗ್ಯಾರೇಜ್, ಆಟೋ ಓಡಿಸಲು ಸೀಮಿತಗೊಳಿಸದ ಕೀರ್ತಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ದ್ದು ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.
ಮುಸ್ಲಿಮರೇ ಕಣ್ಣುಮುಚ್ಚಿ ಕಾಂಗ್ರೆಸ್ ಬೆಂಬಲಿಸುತ್ತಲೇ ಬಂದಿದ್ದೀರಿ. ಆದರೆ ನಿಮಗೆ ಕಾಂಗ್ರೆಸ್ನಿಂದ ಆಗಿರುವುದಾದರೂ ಏನು. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮಾಡಿದ್ದಾದರೂ ಏನು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಬಿಎಸ್ವೈ ಕರೆ ನೀಡಿದರು.
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಹಜ್ ಯಾತ್ರೆಗೆ ಸೌಲಭ್ಯ ಕಲ್ಪಿಸಿದ್ದು, ಅಲ್ಪಸಂಖ್ಯಾತರಿಗೆ ಹಿಂದೆ ಯಾವ ಸರ್ಕಾರ ಮಾಡದಷ್ಟು ಕೆಲಸ ಮಾಡಿದ್ದು ಸೇರಿದಂತೆ ಇತರೆ ಸವಲತ್ತು ಕಲ್ಪಿಸಿದ್ದನ್ನು ಬಿಎಸ್ವೈ ನೆನಪಿಸಿದರು. ಮುಮ್ತಾಜ್ ಅಲಿಖಾನ್ರನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಿದ್ದು ತಾವು ಎಂದರು. ಮುಸಲ್ಮಾನರ ಸಮಗ್ರ ಅಭಿವೃದ್ಧಿ ಕೆಜೆಪಿ ಧ್ಯೇಯವಾಗಿದ್ದು, ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕೇಂದ್ರದಿಂದ ವಂಚನೆ: ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಛತ್ತೀಸ್ಘಡದಲ್ಲಿ ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು ನೀಡಲಿಲ್ಲ. 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು 300 ಕೋಟಿ ರು. ಖರ್ಚು ಮಾಡಿ ಭೂಮಿ ಖರೀದಿಸಿದೆ. ಆದರೆ ಕಲ್ಲಿದ್ದಲು ನೀಡದೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿತು ಎಂದು ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ನೀತಿಯಿಂದಾಗಿ ಕಾವೇರಿ ನದಿ ನೀರಿನ ವಿವಾದ, ಕುಡಿಯುವ ನೀರು ಸೇರಿದಂತೆ ಇತರೆ ವಿಷಯಗಳ ವಿಷಯದಲ್ಲಿ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕೇಂದ್ರದ ಜುಟ್ಟು ಹಿಡಿದು ನ್ಯಾಯ ಕೇಳಲು ಪ್ರಾದೇಶಿಕ ಪಕ್ಷವಾಗಿರುವ ಕೆಜೆಪಿ ಬದ್ಧವಾಗಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.