ಸಂಸದ ಬಸವರಾಜ್ ಪುತ್ರನಿಗೆ ಕೆಜೆಪಿ ಟಿಕೆಟ್
ಕ.ಪ್ರ. ವಾರ್ತೆ ತುಮಕೂರು ಮಾ.26
ತುಮಕೂರು ಸಂಸದ ಜಿ.ಎಸ್. ಬಸವರಾಜು ಪುತ್ರ ಜ್ಯೋತಿ ಗಣೇಶ್ ಹಾಗೂ ಜೆಡಿಎಸ್‌ಗೆ ವಿದಾಯ ಹೇಳಿ ಕೆಜೆಪಿಗೆ ಸೇರ್ಪಡೆಯಾದ ಎಚ್. ನಿಂಗಪ್ಪ ಅವರಿಗೆ ಬಿ.ಎಸ್. ಯಡಿಯೂರಪ್ಪ ವಿಧಾನಸಭಾ ಟಿಕೆಟ್ ಘೋಷಿಸಿದರು.
ತುಮಕೂರಿನ ಸಿದ್ಧಿವಿನಾಯಕ ಸಭಾಂಗಣದಲ್ಲಿ ಏರ್ಪಾಟಾಗಿದ್ದ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಈ ಇಬ್ಬರು ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಟಿಕೆಟ್ ನೀಡಿರುವುದಾಗಿ ತಿಳಿಸಿದರು. ತುಮಕೂರು ನಗರದಿಂದ ಸಂಸದರ ಪುತ್ರ ಜ್ಯೋತಿ ಗಣೇಶ್ ಸ್ಪರ್ಧಿಸಿದರೆ, ತುಮಕೂರು ಗ್ರಾಮಾಂತರಕ್ಕೆ ಎಚ್. ನಿಂಗಪ್ಪ ಅವರು ಕಣಕ್ಕೆ ಇಳಿಯಲಿದ್ದಾರೆ. ಈ ಸಂದರ್ಭದಲ್ಲಿ ಜ್ಯೋತಿ ಗಣೇಶ್ ಹಾಗೂ ನಿಂಗಪ್ಪ ವೇದಿಕೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್. ನಿಂಗಪ್ಪ ಅವರು 20 ರಿಂದ 25 ವರ್ಷಗಳ ಕಾಲ ಜನತಾಪರಿವಾರದಲ್ಲಿದ್ದೆ. ಒಂದು ಬಾರಿ ಶಾಸಕನಾಗಿಯೂ ಆಯ್ಕೆಯಾಗಿದ್ದೆ. 20 ತಿಂಗಳ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ವಾಗ್ದಾನ ಮಾಡಿದಂತೆ ಜೆಡಿಎಸ್, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡಲಿಲ್ಲ. ಈ ಮೂಲಕ ಜೆಡಿಎಸ್ ವಚನ ಭ್ರಷ್ಟವಾಯ್ತು. ಈ ವಚನ ಭ್ರಷ್ಟ ಪಾಲಿನಲ್ಲಿ ತಮ್ಮದು ಪಾತ್ರವಿತ್ತು. ಜತೆಗೆ ಅವಿಶ್ವಾಸ ಮಂಡಿಸಿದ ವೇಳೆ ವರಿಷ್ಠರ ಆದೇಶದ ಪಾಲನೆಯಂತೆ ಬಿಜೆಪಿ ವಿರುದ್ಧ ಮತ ಚಲಾಯಿಸಿ ಯಡಿಯೂರಪ್ಪನವರನ್ನು ಕೆಳಕ್ಕೆ ಇಳಿಸುವಲ್ಲಿ ತಮ್ಮ ಪಾತ್ರವೂ ಇತ್ತು. ಆದರೆ ಜೆಡಿಎಸ್ ಶಾಸಕನಾಗಿ ವರಿಷ್ಠರ ಆದೇಶ ಪಾಲನೆ ಅನಿವಾರ್ಯವಾಗಿತ್ತು. ಇದರಲ್ಲಿ ತಮ್ಮ ವೈಯಕ್ತಿಕ ಪಾತ್ರವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಪಕ್ಷ ಕಟ್ಟಿದ, ಅಧಿಕಾರಕ್ಕೆ ತಂದ ಯಡಿಯೂರಪ್ಪನವರನ್ನು ಆ ಪಕ್ಷದ ಮುಖಂಡರೇ ಪಕ್ಷ ಬಿಡುವಂತೆ ಮಾಡಿದರು. ಅದೇ ರೀತಿ ಎರಡು ಬಾರಿ ಜಿಲ್ಲಾಧ್ಯಕ್ಷನಾಗಿ ಜೆಡಿಎಸ್ ಮೂಲ ನಿವಾಸಿಯಾಗಿದ್ದು ಪಕ್ಷ ಕಟ್ಟಿದ ತಮ್ಮನ್ನು ಪಕ್ಷ ಬಿಡುವಂತೆ ಮಾಡಲಾಯಿತು ಎಂದು ವಿಷಾದಿಸಿದರು.
ಆಭಾರಿ: ಮರ್ಯಾದೆಯಿಂದ ಬರಮಾಡಿಕೊಳ್ಳುವ ಪಕ್ಷಕ್ಕೆ ಸೇರುವ ಇಂಗಿತವನ್ನು ತಾವು ಹಾಗೂ ತಮ್ಮ ಬೆಂಬಲಿಗರು ವ್ಯಕ್ತಪಡಿಸಿದ್ದೆವು. ಅದರಂತೆ ಕೆಜೆಪಿ ತಮ್ಮನ್ನು ಆದರದಿಂದ ಬರಮಾಡಿಕೊಂಡಿದೆ. ಹೇಳಿದಂತೆ ತುಮಕೂರು ಗ್ರಾಮಾಂತರಕ್ಕೆ ಟಿಕೆಟ್ ನೀಡಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಾವು ಆಭಾರಿಯಾಗಿರುವುದಾಗಿ ತಿಳಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.