ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ತಾಂಡವ!

Parashurama
Updated On : 26 Mar 2013, 10:30 am

ಕ.ಪ್ರ. ವಾರ್ತೆ ತಿಪಟೂರು ಮಾ.26
ನಗರದ ಹಾಸನ ರಸ್ತೆಯ ರೇಲ್ವೆ ಗೇಟ್ ಪಕ್ಕದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಹಾಸ್ಟೆಲ್ ಅವ್ಯವಸ್ಥೆಯ ಆಗರವಾಗಿದೆ. ವಿಶೇಷ ಎಂದರೆ, ಗೋಡೌನ್‌ನಂತಿರುವ ಈ ಹಾಸ್ಟೆಲ್‌ಗೆ ತಿಂಗಳಿಗೆ 37 ಸಾವಿರ ಬಾಡಿಗೆ ನೀಡಲಾಗುತ್ತಿದೆ.
ಈ ಹಾಸ್ಟೆಲ್‌ನಲ್ಲಿ ವಿವಿಧ ಕಾಲೇಜುಗಳ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಆದರೆ, ಹಾಸ್ಟೆಲ್‌ನಲ್ಲಿ ಯಾವುದೇ ಸೌಲಭ್ಯಗಳಲ್ಲಿ. ಇಲ್ಲಿನ ವಿದ್ಯಾರ್ಥಿಗಳಿಗೆ ಶೌಚಕ್ಕೆ ಬಯಲೇ ಗತಿ. ಎಲ್ಲಿ ನೋಡಿದರಲ್ಲಿ ಇಸ್ಪಿಟ್ ಎಲೆಗಳು, ಬೀಡಿ, ಸಿಗರೇಟ್ ತುಂಡುಗಳು ಕಾಣ ಸಿಗುತ್ತವೆ. ಹಾಸ್ಟೆಲ್‌ನಲ್ಲಿ ಕಸಗುಡಿಸಿ ತಿಂಗಳುಗಳೇ ಕಳೆದಿರಬಹುದು! ಅಡುಗಡೆ ಮನೆಯ ನೀರು ಹೊರ ಹೋಗಲು ಜಾಗವಿಲ್ಲದ್ದರಿಂದ ಚರಂಡಿಯಂತಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ಅಕ್ಷರಶಃ ನರಕವಾಸವಾಗಿದೆ. ಅಲ್ಲದೆ, ಇಲ್ಲಿ ಶೇ.100ರಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವು ಮೇಲ್ನೋಟನಕ್ಕೆ ಕಂಡುಬರುತ್ತದೆ. ಇಷ್ಟೆಲ್ಲ ಅವ್ಯವಸ್ಥೆಯ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.
ಬರೋಬ್ಬರಿ 37ಸಾವಿರ ಬಾಡಿಗೆ!: ಗೋಡೌನ್‌ನಂತಹ ಈ ಹಾಸ್ಟೆಲ್‌ನ ಕಟ್ಟಡ ಶಿಥಿಲವಾಗಿದೆ. ಮೇಲ್ಚಾವಣಿಗೆ ಹಾಕಿರುವ ಶೀಟ್‌ಗಳು ಎಲ್ಲೆಂದರಲ್ಲಿ ಸೀಳಿಕೊಂಡಿವೆ. ಶೀಟ್ ಕೆಳಗೆ ಹಾಕಲಾಗಿರುವ ತೆಂಗಿನ ತೊಲೆಗಳು ಗೆದ್ದಲು ಹಿಡಿದು ಯಾವಾಗ ಯಾರ ಮೈಮೇಲೆ ಬಿದ್ದು ಬಲಿ ತೆಗೆದುಕೊಳ್ಳುತ್ತವೋ ದೇವರಿಗೇ ಗೊತ್ತು. ಈ ಕಟ್ಟಡ ತಾಲೂಕಿನ ಹಾಲಿ ಶಾಸಕರ ಕುಟುಂಬದ್ದಾಗಿದ್ದು, ಅವರ ಸಹೋದರ ಬಿ.ಸಿ. ರವಿಶಂಕರ ಎಂಬುವವರಿಗೆ ಬಾಡಿಗೆ ಹಣ ನೀಡಲಾಗುತ್ತಿದೆ. ಈ ಅವ್ಯವಸ್ಥೆಯ ಕಟ್ಟಡಕ್ಕೆ ಸರ್ಕಾರ ಕಣ್ಣು ಮುಚ್ಚಿ ತಿಂಗಳಿಗೆ ಬರೋಬ್ಬರಿ 37 ಸಾವಿರ ಬಾಡಿಗೆ ಫಿಕ್ಸ್ ಮಾಡಿದ್ದು, ಯಾವ ಆಧಾರ ಮತ್ತು ಅದ್ಯಾವ ಮೂಲಭೂತ ಸೌಲಭ್ಯಗಳನ್ನು ನೋಡಿ ಅಷ್ಟೊಂದು ದೊಡ್ಡ ಮೊತ್ತದ ಬಾಡಿಗೆಯನ್ನು ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ನೀಡುತ್ತಿದೆಯೋ? ಈ ಬಗ್ಗೆ ತನಿಖೆಯಾಗಬೇಕಾಗಿದೆ.
ಅವ್ಯವಸ್ಥೆಯ ಆಗರ: ಕುಡಿಯಲು ನೀರೇ ಇಲ್ಲಿಲ್ಲ. ಈ ಹಾಸ್ಟೆಲ್‌ನಲ್ಲಿ ವಿವಿಧ ಕಾಲೇಜುಗಳ 80ಕ್ಕೂ ವಿದ್ಯಾರ್ಥಿಗಳು ವಾಸವಿದ್ದು ಕುಡಿಯಲು, ಶೌಚ, ಸ್ನಾನ ಮತ್ತು ಬಟ್ಟೆ ತೊಳೆಯಲಿಕ್ಕೂ ನೀರಿಲ್ಲದೆ ಪರದಾಡುತ್ತಿದ್ದಾರೆ. ಯಾವುದೇ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಯಾರೂ ಗಮನ ಹರಿಸದಿರುವುದನ್ನು ನೋಡಿದರೆ ಇಡೀ ತಾಲ್ಲೂಕು ಆಡಳಿತ ವ್ಯವಸ್ಥೆಯೇ ಯಾವ ರೀತಿ ಎಕ್ಕುಟ್ಟಿ ಹೋಗಿದೆ ಎನ್ನುವುದಕ್ಕೆ ಈ ಹಾಸ್ಟೆಲ್ ಅವ್ಯವಸ್ಥೆಯೇ ಸಾಕ್ಷಿಯಾಗಿದೆ. ವಿಧಿಯಿಲ್ಲದೆ ಯಾತನೆ, ಹಿಂಸೆ ಪಟ್ಟುಕೊಂಡೇ ವಿದ್ಯಾರ್ಥಿಗಳು ಬೀದಿ ನಾಯಿಗಳಿಗೆ ಹಾಕುವಂತ ಆಹಾರ ತಿಂದು ಗಬ್ಬು ನೀರನ್ನೇ ಕುಡಿದು ಬದುಕಬೇಕಾದ ದುಸ್ಥಿತಿ ನಿಜಕ್ಕೂ ಶೋಚನೀಯ.
ಮಳೆ ಬಂದರೆ ನೀರು ಸೋರಿ ನೆಲದ ತುಂಬೆಲ್ಲಾ ಒಂದೆರಡು ಇಂಚು ನಿಂತು ಬಿಡುತ್ತದೆ. ರೂಂಗಳ ಒಳ ಮೇಲ್ಚಾವಣಿ ಹಳೆಯದಾಗಿದ್ದು, ಸಿಮೆಂಟ್ ಯಾವಾಗ ಮೇಲೆ ಬೀಳುತ್ತದೋ ಎಂಬ ಭಯದಲ್ಲಿ ವಿಲವಿಲ ಒದ್ದಾಡುತ್ತಿರುವ ಪರಿಸ್ಥಿತಿ ನಿಜಕ್ಕೂ ಜನಪ್ರತಿನಿಧಿಗಳು ಮತ್ತು ಇಲಾಖೆಯನ್ನೇ ನಾಚಿಸುವಂತಿದೆ.
ಗೋಡೆ, ಕಿಟಕಿಗಳಿಂದ ಮಣ್ಣು ಉದುರುತ್ತಿದ್ದು ಜಿರಲೆ, ಚೇಳು ಮತ್ತು ಇರುವೆಗಳ ಕಾಟ ಬೇರೆ. ಮಲಗಲು ಮಂಚ ಅಥವಾ ಬೇರೆ ವ್ಯವಸ್ಥೆ ಇಲ್ಲದ್ದರಿಂದ ಹಲವು ವಿದ್ಯಾರ್ಥಿಗಳಿಗೆ ಜ್ವರ, ಮೈ ಕಡಿತ, ಚರ್ಮ ಬಾಧೆ, ತಲೆ ನೋವಿನಂತಹ ಕಾಯಿಲೆಗಳು ಬಿಟ್ಟೂ ಬಿಡದೆ ಕಾಡುತ್ತಿವೆ. ಹಾಸ್ಟೆಲ್ ಆವರಣ ಮತ್ತು ಹಾಲ್ ಕಸಗುಡಿಸಿ ತಿಂಗಳುಗಳಾಗಿರುವುದರಿಂದಲೋ ಏನೋ ಕಸದ ರಾಶಿಗಳಿಗೆ ಗೆದ್ದಲು ತುಂಬಿಕೊಂಡಿದೆ.
ಹಾಸ್ಟಲ್ ಅವ್ಯವಸ್ಥೆಯ ಆಗರವಾಗಿರುವುದರಿಂದ ಸ್ನಾನ ಮಾಡಲು ಮತ್ತು ಬಟ್ಟೆ ತೊಳೆಯಲು ವಾರಕ್ಕೊಮ್ಮೆ ತಮ್ಮ ತಮ್ಮ ಊರಗಳಿಗೇ ತೆರಳಬೇಕಾಗಿದೆ. ಹಾಸ್ಟೆಲ್‌ಗೆ ಸೇರುವ ಹುಡುಗರು ತೀರಾ ಮಧ್ಯಮ ಮತ್ತು ಬಡತನ ಜೊತೆಗೆ ದೂರದ ಊರುಗಳಿಂದ ಬಂದವರೇ ಆಗಿರುತ್ತಾರೆ. ಇಂತಹವರು ಈ ಹಾಸ್ಟೆಲ್‌ಗೆ ಸೇರಿರುವ ತಪ್ಪಿಗೆ ವಾರಕ್ಕೊಮ್ಮೆ ಬಸ್ ಚಾರ್ಜ್ ಹೊಂದಿಸಿಕೊಂಡು ಊರುಗಳಿಗೆ ತೆರಳಬೇಕಾಗಿರುವುದು ನೋಡಿದರೆ ಸರ್ಕಾರದ ಸವಲತ್ತುಗಳು ಅರ್ಹರಿಗೆ ಹೇಗೆ ವಂಚಿತವಾಗುತ್ತಿವೆ ಎಂಬುದು ಗೊತ್ತಾಗುತ್ತದೆ.
ಇಡೀ ಹಾಸ್ಟೆಲ್ ಸೊಳ್ಳೆಗಳ ಬೀಡಾಗಿದೆ. ಕಿಟಕಿಗಳಿಗೆ ಸೊಳ್ಳೆ ಜಾಲರಿಗಳಿಲ್ಲದ್ದರಿಂದ ಮತ್ತು ರೂಂಗಳೆಲ್ಲಾ ತೇವಾಂಶದಿಂದಿರುವುದರಿಂದ ಸೊಳ್ಳೆಗಳ ಕಾರುಬಾರಂತೂ ಹೇಳತೀರದಾಗಿದೆ.
ಉಪ್ಪಿಟ್ಟು, ಚಿತ್ರಾನ್ನವೇ ಗತಿ: ಕಾಫಿ ಇಲ್ಲ, ಮೊಟ್ಟೆ ಇಲ್ಲ, ಬಾಳೆ ಹಣ್ಣೂ ಇಲ್ಲ ಎಂದ ಮೇಲೆ ಸರ್ಕಾರ ಇವೆಲ್ಲವುಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಹೊರಡಿಸಿರುವ ಆದೇಶ ಚರಂಡಿಗೆ ಬಿದ್ದಂತಾಗಿದೆ. ಸಾಂಬಾರಿಗೆ ಕೇವಲ ಟಮೋಟೋ, ಸೀಮೆ ಬದನೆಕಾಯಿಯಂತಹ ಅಗ್ಗದ ತರಕಾರಿ ಉಪಯೋಗಿಸುವುದು ಇಲ್ಲಿ ಮಾಮೂಲಿ. ಚಪಾತಿ ಇಡ್ಲಿ-ದೋಸೆ ನೋಡಿದ್ದು ಹೊಟೇಲ್ ಮತ್ತು ಮನೆಯಲ್ಲಿ ಮಾತ್ರ ಎಂಬುದನ್ನು ಹುಡುಗರು ನೊಂದುಕೊಂಡು ಹೇಳುತ್ತಾರೆ.
ಗೆದ್ದಲು ಹಿಡಿದ ಗ್ರಂಥಾಲಯ: ಇಲ್ಲೊಂದು ಗ್ರಂಥಾಲಯ ಮತ್ತು ಕಂಪ್ಯೂಟರ್ ರೂಂ ಇದ್ದು ಇವುಗಳ ಬಾಗಿಲು ತೆರೆದು ತಿಂಗಳುಗಳಾಗಿವೆ. ಅದರೊಳಗಡೆ ಇರುವ ಕಂಪ್ಯೂಟರ್, ಪುಸ್ತಕಗಳು ತುಕ್ಕು ಹಿಡಿಯುತ್ತಿದ್ದು ತೂಗು ಹಾಕಿರುವ ಅಂಬೇಡ್ಕರ್ ಮತ್ತಿತರ ಮಹಾತ್ಮರ ಫೋಟೋಗಳಿಗೆ ಜೇಡಗಳು ಬಲೆ ಹೆಣೆದು ಮುಚ್ಚಿರುವುದನ್ನು ನೋಡಿದರೆ ಸರ್ಕಾರಕ್ಕೆ ನಾಚಿಕೆಯಾಗಬೇಕಿದೆ.
ತಿದ್ದಿಕೊಳ್ಳದ ಇಲಾಖೆಗಳು: ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವ್ಯವಸ್ಥೆ, ಅಸಹ್ಯಗಳ ಬಗ್ಗೆ ಹಲವಾರು ಬರೆದು ಎಚ್ಚರಿಸಿದ್ದರೂ ತಾಲ್ಲೂಕಿನ ಹಾಸ್ಟೆಲ್‌ಗಳು ಮಾತ್ರ ಸ್ವಲ್ಪವೂ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಇಲ್ಲಿನ ಎಲ್ಲಾ ಹಾಸ್ಟೆಲ್‌ಗಳ ವಾರ್ಡನ್‌ಗಳು ಬಹಳ ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವುದಲ್ಲದೆ ದುಡ್ಡು ಹೊಡೆಯುವ ದಂದೆಯನ್ನಾಗಿಸಿಕೊಂಡಿದ್ದು ಇದಕ್ಕೆ ಮೇಲಧಿಕಾರಿಗಳ ಕುಮ್ಮಕ್ಕೇ ಕಾರಣವಾಗಿದೆ. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಈ ಇಲಾಖೆಗಳ ಬೇಜವಾಬ್ದಾರಿ ಸಿಬ್ಬಂದಿ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೇ ಇಂತಹ ಬೊಗಳೆ ಕಲ್ಯಾಣ ಇಲಾಖೆಗಳಿಗೆ ಬುದ್ದಿ ಕಲಿಸಬೇಕಾದ ಕಾಲ ದೂರವಿದ್ದಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments