ಮಧುಗಿರಿ: ಕಲೆ ಬಹುಮುಖ ಸಂಸ್ಕೃತಿಯ ಅಭಿವ್ಯಕ್ತಿ, ಎಲ್ಲರ ನೋವು, ನಲಿವಿನ ಸ್ಪಂದನ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರು ಯುವ ಕೇಂದ್ರ ತುಮಕೂರು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಧುಗಿರಿ ಉತ್ಸವ ಹಾಗೂ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲೆ, ಸಂಸ್ಕೃತಿ, ಸಾಹಿತ್ಯದ ತವರೂರಾದ ಈ ಊರಿನ ಜನ ಸ್ವಾಭಿಮಾನದ ಸಂಕೇತವಾಗಿ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು. ತಾಲೂಕ ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಈ ಬೆಟ್ಟವನ್ನು ಚಾರಣಕ್ಕೆ ಸೂಕ್ತವಾಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್,ಪತ್ರಕರ್ತರಾದ ವೈ.ಸೋಮಶೇಖರ್, ಕೆ.ಎಸ್.ರಾಮಂಚಂದ್ರರಾವ್, ಪ್ರಸನ್ನ, ಕಾರ್ಯದರ್ಶಿ ನಟರಾಜು ಮತ್ತಿತರರು ಉಪಸ್ಥಿತರಿದ್ದರು.