ಕ.ಪ್ರ. ವಾರ್ತೆ ್ಣ ಶಿರಾ ್ಣ ಮಾ.30
ಚುನಾವಣೆಯಲ್ಲಿ ಗೆದ್ದು ಗದ್ದುಗೆಯಲ್ಲಿ ಕೂರಲು ಹಣಬಲದಿಂದ ಮಾತ್ರ ಸಾಧ್ಯ ಎಂದು ದುರಹಂಕಾರ ಪಡುತ್ತಿರುವ ಶಾಸಕ ಟಿ.ಬಿ.ಜಯಚಂದ್ರ ಅವರ ಈ ಬಾರಿಯ ಚುನಾವಣೆಯ ತಂತ್ರಗಾರಿಕೆಗೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್‌ನ ಮಾಜಿ ಸಚಿವ ಬಿ.ಸತ್ಯನಾರಾಯಣ ಟೀಕಿಸಿದರು.
ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ದೊಡ್ಡಆಲದ ಮರದ ಬಳಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಚುನಾವಣೆಗೆ ಹಣ ಬೇಕು ನಿಜ, ನನ್ನಲ್ಲಿ ಚುನಾವಣೆಗೆ ಹೋರಾಡಲು ಹಣವಿಲ್ಲ. ಈ ವಿಷಯ ಇಡೀ ಕ್ಷೇತ್ರದ ಜನತೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆಲ್ಲ ಗೊತ್ತು. ಮತದಾರರಿಗೆ ಹಣದ ಆಮಿಷ ಒಡ್ಡಿ ಮತ್ತೊಮ್ಮೆ ಗೆದ್ದು ಬರುತ್ತೇನೆಂದು ಬೀಗುತ್ತಿರುವ ಕ್ಷೇತ್ರದ ಶಾಸಕರಿಗೆ ಜನತೆ ಖಂಡಿತ ಪಾಠ ಕಲಿಸುತ್ತಾರೆ ಎಂದ ಸತ್ಯನಾರಾಯಣ ಅವರು, ಮನೆಗೊಂದು ಕೆಲಸ ಊರಿಗೊಂದು ಕೆರೆಯ ಭರವಸೆ ನೀಡಿ ಕಳೆದ ನಾಲ್ಕು ಚುನಾವಣೆಗಳಲ್ಲೂ ಕಳ್ಳಂಬೆಳ್ಳ ಜನತೆಗೆ ಮಂಕು ಬೂದಿ ಎರಚಿ ಆಯ್ಕೆಗೊಳ್ಳುತ್ತಲೆ ಬಂದ ಜಯಚಂದ್ರ ಕಳ್ಳಂಬೆಳ್ಳ ಬಳಿಯ ಹತ್ತು ಹಲವು ಹಳ್ಳಿಗಳ ಮುಖ್ಯ ಸೇತುವೆಯಾದ ಯಾಲದ ಬಾಗಿ ಸೇತುವೆ ಮುರಿದು ಬಿದ್ದು ವರ್ಷಗಳೇ ಮುಗಿದರೂ ಕಟ್ಟಿಸಲಾಗಿಲ್ಲ ಎಂದರು.
ಚಿಪ್ಪೇ ಗತಿ: ಚಿಕ್ಕನಾಯಕನಹಳ್ಳಿಯಿಂದ ಶಿರಾ ಕ್ಷೇತ್ರಕ್ಕೆ ವಲಸೆ ಬಂದು ಈ ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಹಿಡಿದು ಅಭಿವೃದ್ಧಿ ಕೆಲಸಗಳ ನೆಪದಲ್ಲಿ ದಂಧೆಯನ್ನೇ ನಡೆಸುತ್ತಿರುವ ಜಯಚಂದ್ರ ಮತ್ತೊಮ್ಮೆ ಈ ಕ್ಷೇತ್ರದಿಂದ ಗೆದ್ದರೆ ಮತದಾರರ ಕೈಗೆ ಚಿಕ್ಕನಾಯಕನಹಳ್ಳಿಯ ಚಿಪ್ಪೆ ಗತಿ ಎಂದರು.
ಬಿ.ಎಸ್.ಗೆ. ಟಿಕೇಟ್: ಶಿರಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್‌ಗಾಗಿ ಯಾರು ಪರದಾಡುವ ಅವಶ್ಯಕತೆ ಇಲ್ಲ. ಬಿ.ಸತ್ಯನಾರಾಯಣ ಅವರಿಗೆ ಟಿಕೆಟ್ ನೀಡುವುದಾಗಿ ಈಗಾಗಲೇ ವರಿಷ್ಠ ರೇ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಶಯ ಬೇಡ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಹುಲಿನಾಯ್ಕರ್ ತಿಳಿಸಿದರು.
ಶಿರಾ ಕ್ಷೇತ್ರದ ಈ ಭಾರಿಯ ವಿಧಾನಸಭೆ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುವ ಪ್ರಬಲ ಹೊರಾಟವೆ ಆಗಿದ್ದು ಸತ್ಯಕ್ಕೆ ಗೆಲವು ಖಚಿತ ಎನ್ನುವುದು ಈ ಬೃಹತ್ ಸಮಾವೇಶದಿಂದ ಸಾಬೀತಾಗಿದೆ ಎಂದು ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್ ತಿಳಿಸಿದರು.
ಹೋರಾಟ ನಡೆಸಿಲ್ಲ: ಹೇಮಾವತಿ ನೀರು ತಂದಿದ್ದು ನಾನು ಎಂದು ಬೀಗುತ್ತಿರುವ ಜಯಚಂದ್ರ ಈ ಭಾಗದ ಜನತೆಗೆ ಮಂಕುಬೂದಿ ಎರಚಿ ಕಳೆದ ಚುನಾವಣೆಯಲ್ಲಿ ಗೆದ್ದು ಬಿಟ್ಟಿದ್ದಾರೆ. ಜಯಚಂದ್ರ ನೀರಿಗಾಗಿ ಹೋರಾಡಿದವರೂ ಅಲ್ಲ. ಹೊರಾಡಿ ಜೈಲು ಸೇರಿದವರೂ ಅಲ್ಲ. ಈ ಜಿಲ್ಲೆಗೆ ಹೇಮಾವತಿ ನೀರು ತರಲು ಹೋರಾಡಿ ಜೈಲು ಸೇರಿದ್ದು ದಿವಂಗತ ವೈ.ಕೆ.ರಾಮಯ್ಯ ಅವರ ಹೆಸರನ್ನು ಜಯಚಂದ್ರ ಅವರು ಬಾಯಿ ಬಿಟ್ಟು ಹೇಳುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಜಯಚಂದ್ರ ಶಾಸಕರಾದಾಗಿನಿಂದ ಕ್ಷೇತ್ರದಲ್ಲಿ ಎಷ್ಟು ಶಾಲೆಗಳನ್ನು ಮಂಜೂರು ಮಾಡಿದ್ದೀರಿ, ಎಷ್ಟು ಶಾಲಾ ಕಾಂಪೌಂಡ್ ಕೆಲಸ ಮಾಡಿಸಿದ್ದೀರಿ, ಬಡವರಿಗೆ ಸರ್ಕಾರದಿಂದ ಎಷ್ಟು ಮನೆಗಳನ್ನು ಕೊಡಿಸಿದ್ದೀರಿ. ನಿಮ್ಮ ಸಾಧನೆಗಳೆಲ್ಲವೂ ಶೂನ್ಯ ಎಂದು ಜಯಚಂದ್ರ ವಿರುದ್ಧ ಟೀಕಿಸಿದರು.
ಸಮಾವೇಶದಲ್ಲಿ ಜೆಡಿಎಸ್ ಮುಖಂಡ ಕೆ.ಎಲ್. ಮಹದೇವಪ್ಪ, ಜಿ.ಪಂ. ಸದಸ್ಯ ಬಿ.ಕೆ.ಬಡೀರಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಎಸ್.ಎಲ್.ಗೋವಿಂದರಾಜು, ಎಸ್.ಆರ್. ಗೌಡ, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಮತ್ತಿತರರು ಮಾತನಾಡಿದರು.
ಜಿ.ಪಂ. ಸದಸ್ಯ ಕೃಷ್ಣಮೂರ್ತಿ, ವಿಶಾಲಾಕ್ಷಿ ಪ್ರಕಾಶ ಗೌಡ, ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಜಿ.ಪಂ. ಸದಸ್ಯ ಲಲಿತಾ ಮಂಜುನಾಥ್, ನಗರಸಭಾ ಸದಸ್ಯ ಆರ್.ಉಗ್ರೇಶ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸತ್ಯಪ್ರಕಾಶ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ದೇವರಾಜು, ಡಾ.ಮನುಪಾಟೀಲ್, ಬಂಡೇರಾಮಕೃಷ್ಣ, ಬಾಂಬೆ ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು. ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾದ ಜೆಡಿಎಸ್ ಎಲ್ಲಾ ನಗರಸಭಾ ಸದಸ್ಯರನ್ನು ಸನ್ಮಾನಿಸಲಾಯಿತು.