ಕ.ಪ್ರ. ವಾರ್ತೆ ್ಣ ಕುಣಿಗಲ್ಣ್ ಮಾ.30
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಲವಂತವಾಗಿ ಗೈಡ್ ಕೊಳ್ಳುವಂತೆ ಒತ್ತಡ ಹಾಕಿದ್ದಲ್ಲದೆ, ತಮ್ಮಿಂದ ಭವಿಷ್ಯ ಹೇಳಿಸಿಕೊಳ್ಳಬೇಕೆಂದು ತಾಕೀತು ಮಾಡಿ, ತಲಾ 15 ರು. ಶುಲ್ಕ ವಸೂಲು ಮಾಡಿದ, ಹಿಂದಿ ಶಿಕ್ಷಕನೊಬ್ಬನ ಧೋರಣೆಯನ್ನು ಪ್ರಶ್ನಿಸಿದ ದೈಹಿಕ ಶಿಕ್ಷಕನ ಮೇಲೆ, ಹಿಂದಿಶಿಕ್ಷಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ವರದಿಯಾಗಿದೆ.
ತಾಲೂಕಿನ ನಿಡಸಾಲೆ ಸರ್ಕಾರಿ ಪದವಿಪೂರ್ನ ಕಾಲೇಜಿನ ಪ್ರೌಢಶಾಲಾ ವಿಭಾಗದ, ಹಿಂದಿ ಶಿಕ್ಷಕ ಶ್ರೀನಿವಾಸ್ ಎಂಬಾತ, ಕೆಲ ದಿನಗಳ ಹಿಂದೆ, ತಾನು ಭವಿಷ್ಯ ಹೇಳುವುದಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯ ಕೇಳಲು ತಲಾ 15 ರು. ವಸೂಲು ಮಾಡಿದ್ದಲ್ಲದೆ, ಹಿಂದಿ ಗೈಡ್ ಪಡೆಯಲೇಬೇಕೆಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದು, ಇದರಿಂದ ರೋಸಿಹೋದ ವಿದ್ಯಾರ್ಥಿಗಳು, ಹಿಂದಿ ಶಿಕ್ಷಕರ ದೌರ್ಜನ್ಯದ ಬಗ್ಗೆ ಶಾಲೆಯ ದೈಹಿಕ ಶಿಕ್ಷಕ ಕೃಷ್ಣಮೂರ್ತಿ ಬಳಿ ಅಹವಾಲು ಸಲ್ಲಿಸಿದರು. ಇದರ ಮೇರೆಗೆ ದೈಹಿಕ ಶಿಕ್ಷಕರು, ಹಿಂದಿ ಶಿಕ್ಷಕನ್ನು ಪ್ರಶ್ನಿಸಲು ಮುಂದಾದಾಗ ಹಿಂದಿಶಿಕ್ಷಕ, ದೈಹಕ ಶಿಕ್ಷಕರ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು, ಬಿಇಒ ಅವರಿಗೆ ದೂರು ನೀಡಿದ ಮೇರೆಗೆ, ಬಿಇಒ ಲೋಕೇಶ್, ಗುರುವಾರ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಮಿತಿ ಪದಾಧಿಕಾರಿಗಳು, ಪೋಷಕರು, ಹಿಂದಿ ಶಿಕ್ಷಕರ ಧೋರಣೆ ಖಂಡಿಸಿ, ಸೂಕ್ತ ಆಧಾರಗಳನ್ನು ಒದಗಿಸಿದ ಮೇರೆಗೆ, ಬಿಇಒ ಲೋಕೇಶ್, ಹಿಂದಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.