ಕ.ಪ್ರ.ವಾರ್ತೆ ್ಣ ಪಾವಗಡ ್ಣ ಮಾ.30
ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಸಿ ಕಾಲೋನಿಯೊಂದರಲ್ಲಿ ಕೈಗೊಂಡ ಕಾಮಗಾರಿಗಳು ಬಹುತೇಕ ಕಳಪೆಯಿಂದ ಕೂಡಿದ್ದು ಸುಮಾರು 25ಲಕ್ಷ ರು. ದುರುಪಯೋಗವಾಗಿದೆ ಎಂದು ಸಾಸಲಕುಂಟೆ ಗ್ರಾಮದ ಎಸ್‌ಸಿ ಕಾಲೋನಿ ಸಾರ್ವಜನಿಕರು ಆರೋಪಿಸಿದ್ದಾರೆ.
2012-13 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕಿನ ಸಾಸಲಕುಂಟೆ ಎಸ್‌ಸಿ ಕಾಲೋನಿಯ ಅಭಿವೃದ್ಧಿಗೆ ಸುಮಾರು 25ಲಕ್ಷ ಬಿಡುಗಡೆಯಾಗಿದ್ದು ಈ ಯೋಜನೆಗೆ ಸಂಬಂಧಪಟ್ಟಂತೆ ಜಿಪಂ ಸಹಾಯಕ ಕಿರಿಯ ಎಂಜಿನಿಯರ್ ಅವರು ಎಸ್‌ಸಿ ಕಾಲೋನಿಯಲ್ಲಿ ಕೈಗೊಂಡ 10ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿ ಕಳಪೆಯಿಂದ ಕೂಡಿದೆ.
ಕಾಮಗಾರಿ ನಿರ್ಮಿಸಿದ 2 ತಿಂಗಳಲ್ಲಿಯೆ ಸಿಸಿ ರಸ್ತೆ ಸಂಪೂರ್ಣ ಹಾಳಾಗಿ ಸಾರ್ವಜನಿಕರು ಓಡಾಡಲು ತೀವ್ರ ಸಮಸ್ಯೆ ಆಗಿದೆ. ಅಲ್ಲದೆ ಇದೇ ಯೋಜನೆಯಲ್ಲಿ ಕೈಗೊಂಡ ಕಾಲೋನಿ ಚರಂಡಿ ನಿರ್ಮಾಣದ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿದ ಕಾರಣ ಚರಂಡಿಯಲ್ಲಿ ಮನೆಗಳ ಬಚ್ಚಲು ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಬಿಡಾಡಿ ಹಂದಿಗಳಿಗೆ ಆಶ್ರಯವಾಗಿರುವುದಲ್ಲದೆ ರಾತ್ರಿಯಿಡಿ ವಿಪರೀತ ಸೊಳ್ಳೆಗಳ ಹಾವಳಿ ಹಾಗೂ ಚರಂಡಿ ಅಲ್ಲಲ್ಲಿ ಶಿಥಿಲಗೊಂಡಿರುವುದಾಗಿ ಆರೋಪಿಸಿದ್ದಾರೆ. ಸ್ಥಳಕ್ಕೆ ಜಿಪಂ ಸಿಇಒ ಅವರು ಭೇಟಿ ನೀಡಿ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.