ಕಾವೇರಿ: ಅಧಿಕಾರಕ್ಕೆ ಬಂದರೆ ಸುಪ್ರೀಂಗೆ ರಿಟ್ ಅರ್ಜಿ
ಕ.ಪ್ರ.ವಾರ್ತೆ ತುಮಕೂರು ಮೇ 1-
ಜೆಡಿಎಸ್ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದೇ ಆದಲ್ಲಿ ಕಾವೇರಿ ಐತೀರ್ಪಿನ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಮತ್ತೊಮ್ಮೆ ರಿಟ್ ಅರ್ಜಿ ಸಲ್ಲಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಅವರು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೊಳಪಡುವ ಹೆಬ್ಬೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಗೌರಿಶಂಕರ್ ಪರ ಮತಯಾಚಿಸಿ, ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಐತೀರ್ಪಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಈ ನಷ್ಟ ಸರಿದೂಗಿಸದಿದ್ದರೆ ಕಾವೇರಿ ನದಿ ನೀರು ರಾಜ್ಯಕ್ಕೆ ಲಭಿಸದೆ ಕೈ ತಪ್ಪುವುದರಲ್ಲಿ ಸಂಶಯವಿಲ್ಲ ಎಂದರು.
ಸಣ್ಣತನ: ಕಾವೇರಿ ನದಿ ವಿವಾದ ಮುಂದಿಟ್ಟುಕೊಂಡು ದೇವೇಗೌಡರ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿವೆ. ಇದು ಈ ಪಕ್ಷಗಳ ಸಣ್ಣತನದ ನಡವಳಿಕೆ ಸೂಚಿಸುತ್ತದೆ.
ಕಾವೇರಿ ಐತೀರ್ಪಿನಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ ಎಂಬ ಸತ್ಯ ಈ ಪಕ್ಷಗಳಿಗೂ ಗೊತ್ತು. ಆದರೆ ಅಧಿಕಾರದ ಲಾಲಸೆಗೆ ಬಿದ್ದು ತಮಿಳುನಾಡು ಸರಕಾರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ಬಗ್ಗೆ ಚಕಾರವೆತ್ತದೆ ಬಾಯಿ ಮುಚ್ಚಿ ಕುಳಿತಿದೆ.
ಇನ್ನು ರಾಜ್ಯ ಸರ್ಕಾರದ ಸ್ಥಿತಿಯೂ ಇದಕ್ಕೆ ಹೊರತಗಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಣ್ಣಿನ ಮಗನಾಗಿ ಕನ್ನಡ ನಾಡಿನ ಜೀವನದಿ ಕಾವೇರಿ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದೇನೆ. ಯಾರು ಏನೇ ಬೊಗಳಿದರೂ ಹೋರಾಟದಿಂದ ಹಿಂದೆ ಸರಿಯುವ ಜಾಯಮಾನ ನನ್ನದಲ್ಲ ಎಂದರು.