ಕುಣಿಗಲ್: ಸಹೋದರರ ಸವಾಲ್
ಉಗಮ ಶ್ರೀನಿವಾಸ್
ಕ.ಪ್ರ. ವಾರ್ತೆ ತುಮಕೂರು ಮೇ 1
ಕುದುರೆ ಸ್ಟಡ್ ಫಾರಂನಿಂದ ರಾಜ್ಯದ ಗಮನಸೆಳೆದಿರುವ ಕುಣಿಗಲ್ನಲ್ಲಿ ಈಗ ಸಹೋದರರ ನಡುವೆ ಜಿದ್ದಾ ಜಿದ್ದಿ ನಡೆದಿದೆ.
ಹುಟ್ಟಿದಾಗ ಅಣ್ಣ, ತಮ್ಮ, ಬೆಳೆಯುತ್ತಿದ್ದಂತೆ ದಾಯಾದಿ ಎನ್ನುವ ಹಾಗೆ ಕುಣಿಗಲ್ನಲ್ಲಿ ಜೆಡಿಎಸ್ನಿಂದ ಅಣ್ಣ ಮತ್ತು ಬಿಜೆಪಿಯಿಂದ ತಮ್ಮ ಕಣದಲ್ಲಿ ಇದ್ದಾರೆ.
ಕಳೆದ ಬಾರಿಯೂ ಸಹ ಅಣ್ಣ ಡಿ. ನಾಗರಾಜಯ್ಯ ಅವರು ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಡಿ. ಕೃಷ್ಣಕುಮಾರ್ ಸ್ಪರ್ಧಿಸಿದ್ದರು. ಆದರೆ ಅಣ್ಣ, ತಮ್ಮರ ಜಗಳದ ಲಾಭವನ್ನು ಕಾಂಗ್ರೆಸ್ನ ಬಿ.ಬಿ. ರಾಮಸ್ವಾಮಿಗೌಡ ಪಡೆದು ಅನಾಯಾಸವಾಗಿ ವಿಧಾನಸಭೆ ಪ್ರವೇಶಿಸಿದ್ದರು. ಈಗ ಮತ್ತೆ ಇವರಿಬ್ಬರು ಕಣದಲ್ಲಿದ್ದಾರೆ. ಕುಣಿಗಲ್ ತಾಲೂಕು ಎಡೆಯೂರು ಹೋಬಳಿ ಕನ್ನಗುಣಿಯ ಡಿ. ನಾಗರಾಜಯ್ಯ ಅವರು ಈವರೆಗೆ 7 ಚುನಾವಣೆಯನ್ನು ಎದುರಿಸಿದ್ದರು. 5 ವಿಧಾನಸಭೆ, 1 ಲೋಕಸಭೆ ಮತ್ತು 1 ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ 3 ಬಾರಿ ಶಾಸನ ಸಭೆಗೆ ಆಯ್ಕೆಯಾಗಿದ್ದರು. ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಡಿ. ನಾಗರಾಜಯ್ಯ ಅವರ ಎಲ್ಲಾ ರಾಜಕೀಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ತಮ್ಮ ಕೃಷ್ಣಕುಮಾರ್ ಕಳೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ವರಿಷ್ಠರು ಡಿ. ನಾಗರಾಜಯ್ಯಗೆ ಮಣೆ ಹಾಕಿದ್ದರು. ಆಗ ಕೃಷ್ಣಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧೆಗೆ ನಿಂತಿದ್ದರು. ಕಳೆದ ಚುನಾವಣೆಯಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದ ಹೆಗ್ಗಳಿಗೆ ಕೃಷ್ಣಕುಮಾರ್ ಅವರದ್ದು.
ಈ ಬಾರಿ ಮತ್ತೆ ಇವರಿಬ್ಬರು ಚುನಾವಣೆಗೆ ನಿಂತಿದ್ದಾರೆ. ಅಲ್ಲದೇ ಇವರಿಬ್ಬರ ನಡುವೆ ತೀವ್ರ ಸ್ಪರ್ಧೆ ಕೂಡ ಏರ್ಪಟ್ಟಿದೆ. ಕೊತ್ತಗೆರೆ, ಹುತ್ತರಿದುರ್ಗ, ಹುಲಿಯೂರುದುರ್ಗ, ಕಸಬಾ, ಅಮೃತೂರು, ಎಡೆಯೂರು ಹೋಬಳಿ ಈ ಕ್ಷೇತ್ರಕ್ಕೆ ಒಳಪಡುತ್ತದೆ. ಈಗಾಗಲೇ ಚುನಾವಣೆ ಜೋರಾಗಿದ್ದು ಅಣ್ಣ, ತಮ್ಮಂದರಲ್ಲಿ ಯಾರು ಗೆಲ್ಲುತ್ತಾರೆ. ಅಥವಾ ಇವರಿಬ್ಬರ ಜಗಳ ಮತ್ತೊಬ್ಬರಿಗೆ ಲಾಭವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.