ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಲಸ ನೋಡಿ ಬೆಂಬಲಿಸಿ: ಸೊಗಡು ಮನವಿ

Rashmi Kasaragodu
Updated On : 2 May 2013, 12:10 pm

ಕ.ಪ್ರ. ವಾರ್ತೆ   ತುಮಕೂರು   ಮೇ 1
ತುಮಕೂರು ನಗರದಲ್ಲಾಗಿರುವ ಶಾಶ್ವತ ಕೆಲಸ-ಕಾರ್ಯ ನೋಡಿ ಬೆಂಬಲಿಸಲು ತುಮಕೂರು ನಗರ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಮನವಿ ಮಾಡಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20 ವರ್ಷಗಳ ಕಾಲ ಶಾಸಕನಾಗಿ, ಅಲ್ಪಾವಧಿಗೆ 2 ಬಾರಿ ಮಂತ್ರಿಯಾಗಿ ತುಮಕೂರು ನಗರಕ್ಕೆ ಶಾಶ್ವತವಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ ನೆಮ್ಮದಿ ನನಗಿದೆ. ಅಭಿವೃದ್ಧಿ ಹಾಗೂ ಶಾಂತಿ ತಮ್ಮ ಆದ್ಯತೆಯಾಗಿದ್ದು, ಕಳೆದ 20 ವರ್ಷಗಳಿಂದ ಕರ್ಪ್ಯೂ, ಗೋಲಿಬಾರ್ಗೆ ಮಾಫಿಯಾಗಳಿಗೆ ಅವಕಾಶ ನೀಡದೆ ಶಾಂತಿ ಕಾಪಾಡಿದ್ದು ತಮ್ಮ ಹೆಗ್ಗಳಿಕೆ ಎಂದು ಸೊಗಡು ಪ್ರತಿಪಾದಿಸಿದರು.
1994 ರಲ್ಲಿ ಎಲ್ಲ ವರ್ಗದವರ ಬೆಂಬಲದೊಂದಿಗೆ ಶಾಸಕನಾದೆ. ಅಂದಿನಂತೆ ಇಂದೂ ಕೂಡ ಎಲ್ಲ ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೇನೆ. ರಸ್ತೆ, ಚರಂಡಿ, ಒಳಚರಂಡಿ, ವಿದ್ಯುತ್ ದೀಪ, ವಿದ್ಯುತ್ ಸರಬರಾಜು, ಕುಡಿಯುವ ನೀರಿನ ಪೂರೈಕೆ, ಸೇತುವೆ, ರೇಲ್ವೆ ಮೇಲ್ಸೇತುವೆ ನಿರ್ಮಾಣ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣ, ಅಮಾನಿಕೆರೆ ಅಭಿವೃದ್ಧಿ, ಹೇಮಾವತಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆ, ಓವರ್ಹೆಡ್ ಟ್ಯಾಂಕ್ ನಿರ್ಮಾಣ, ಹಾಸ್ಟೆಲ್ಗಳ ನಿರ್ಮಾಣ, ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ತಮ್ಮ ಅವಧಿಯ ಸಾಧನೆ ಎಂದು ಸೊಗಡು ಪ್ರತಿಪಾದಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಸಹ ತಮ್ಮ ನೀರಾವರಿ, ಕುಡಿಯುವ ನೀರಿನ ಹೋರಾ ಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಎಂದರು.
ಜಿಎಸ್ಬಿ. ವಿರುದ್ಧ ಕಿಡಿ: ಸಂಸದ ಜಿ.ಎಸ್. ಬಸವರಾಜು ಬಿಜೆಪಿ ಟಿಕೆಟ್ನಿಂದ ಗೆದ್ದು, ಕೆಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ  ಕೆಜೆಪಿ ಒಂದೂ ಸ್ಥಾನ ಗೆಲ್ಲಲ್ಲ. ಆದರೆ ತಮ್ಮ ಮಗನನ್ನು ಮಾತ್ರ ಉಳಿಸಿಕೊಳ್ಳಿ ಎಂದು ಗೋಗರೆಯುತ್ತಿದ್ದಾರೆ. ಇದು ಸಂಸದರ ಸ್ವಾರ್ಥ ಹಾಗೂ ಹತಾಶ ಸ್ಥಿತಿಗೆ ಉದಾಹರಣೆಯಾಗಿದೆ. ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಿದ್ದ ಬಸವರಾಜು ಅವರಿಗೆ ಕುರ್ಚಿ ನೀಡಿದ್ದು ಬಿಜೆಪಿ, ಮನ್ನಣೆ ನೀಡಿದ್ದು, ಜನತೆ. ಮೂಲೆಗುಂಪಾಗಿದ್ದ ಸಂಸದರಿಗೆ ನೆಲೆ ಒದಗಿಸಿದ್ದು ತಪ್ಪೇ ಎಂದು ಸೊಗಡು ಮಾರ್ಮಿಕವಾಗಿ ಪ್ರಶ್ನಿಸಿದರು.
ಬುರ್ಖಾ ತೆಗೆದು ಪ್ರಚಾರ ನಡೆಸಲಿ: ಸಂಸದ ಜಿ.ಎಸ್. ಬಸವರಾಜು ಮೊದಲು ಬಿಜೆಪಿ  ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿ. ನಂತರ ತಮ್ಮ ಮಗ ಹಾಗೂ ಕೆಜೆಪಿ ಪರ ಬಹಿರಂಗವಾಗಿ ಪ್ರಚಾರ ನಡೆಸಲಿ. ಅದು ಬಿಟ್ಟು ಗೆದ್ದ ಪಕ್ಷವನ್ನು ಕಡೆಗಣಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಸರಿಯಲ್ಲ. ಇದು ಬಸವರಾಜು ಅವರಿಗೆ ಶೋಭೆ ತರುವಂತದ್ದಲ್ಲ. ಬಸವರಾಜು ಬುರ್ಖಾ ಹಾಕಿಕೊಂಡು ತುಮಕೂರು ನಗರ ಕೆಜೆಪಿ ಅಭ್ಯರ್ಥಿ ಹಾಗೂ ತಮ್ಮ ಮಗ ಜ್ಯೋತಿ ಗಣೇಶ್ ಪರ ಪ್ರಚಾರ ನಡೆಸುವುದನ್ನು ನಿಲ್ಲಿಸಲಿ. ಧೈರ್ಯವಿದ್ದರೆ ಬಸವರಾಜು ಸುದ್ದಿಗೋಷ್ಠಿ ನಡೆಸಿ ತಮ್ಮ ಮಗನ ಪರ ಮತಯಾಚಿಸಲಿ ಎಂದು ಸವಾಲು ಹಾಕಿದರು.
ಸಂಬಂಧಿಕರಿಗೆ ಬೆದರಿಕೆ: ಸಂಸದ ಜಿ.ಎಸ್. ಬಸವರಾಜು ತಮ್ಮ ಪರ ಪ್ರಚಾರ ನಡೆಸದೆ ಬಿಜೆಪಿಯಲ್ಲಿರುವ ತಮ್ಮ ಸಂಬಂಧಿಕರಾದ ಪಂಚಾಕ್ಷರಯ್ಯ ಹಾಗೂ ಅವರ ಸೊಸೆ, ಅಳಿಯನಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಕಂಟ್ರಾಕ್ಟರ್ ವೇಣುಗೋಪಾಲ್ಗೂ ಸಹ ಬೆದರಿಕೆ ಒಡ್ಡಿದ್ದಾರೆ. ಕೆಜೆಪಿ ಪರ, ಜ್ಯೋತಿಗಣೇಶ್ ಪರ ಪ್ರಚಾರ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ. ಸಂಸದ ಬಸವರಾಜು ಸಾಂಸಾರಿಕ ಜೀವನಕ್ಕೆ ತಲೆಹಾಕಿ, ಸಂಸಾರಗಳ ನೆಮ್ಮದಿ ಕೆಡಿಸುತ್ತಿದ್ದಾರೆ. ಜಾತಿ ಹೆಸರೇಳಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಹಿರಿಯ ಬಿಜೆಪಿ ಕಾರ್ಯಕರ್ತರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.


ಜನ ಛೀಮಾರಿ ಹಾಕಬೇಕು
ಹಣಕ್ಕಾಗಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಪ್ರಜಾಪ್ರಭುತ್ವ ಮಾರಾಟವಾಗುತ್ತಿದೆ. ಕೆಟ್ಟ ಪರಂಪರೆಗೆ ಹಣ ಹಂಚುವುದರ ಮೂಲಕ ನಾಂದಿ ಹಾಡಲಾಗುತ್ತಿದೆ. ಹಣ ಹಂಚುವವರಿಗೆ ಜನ ಛೀಮಾರಿ ಹಾಕಬೇಕು. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸೊಗಡು ಶಿವಣ್ಣ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement