ತುರುವೇಕೆರೆ: ಫೋಟೋ ಫಿನಿಷ್ ಫಲಿತಾಂಶ ಖಚಿತ
ಎಸ್.ನಾಗಭೂಷಣ
ಕ.ಪ್ರ. ವಾರ್ತೆ ತುರುವೇಕೆರೆ ಮೇ 1
ಈ ಬಾರಿ ಇಲ್ಲಿ ಸುಮಾರು 1.75 ಸಾವಿರದಷ್ಟು ಮತದಾರರು ಇದೇ 5 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಗಳ ಹಣೆಬರಹವನ್ನು ಬರೆಯಲು ಸನ್ನದ್ಧರಾಗಿದ್ದಾರೆ. ಮಹಿಳೆಯರು ಹಾಗೂ ಪುರುಷರು ಆಜುಬಾಜಿನಲ್ಲಿ ಸರಿಸಮಾನವಾಗಿದ್ದಾರೆ.
ಇದುವರೆಗೂ ನಡೆದಿರುವ ಚುನಾವಣೆಯಲ್ಲಿ ಸತತವಾಗಿ ಎರಡನೇ ಬಾರಿ ಗೆದ್ದಿರುವ ಶಾಸಕರು ಇಲ್ಲಿ ಯಾರೂ ಇಲ್ಲ. ಹಾಗೆಯೇ 1989 ರಲ್ಲಿ ಕಾಂಗ್ರೆಸ್ನ ಎಸ್.ರುದ್ಪಪ್ಪನವರು ಒಂದೇ ಬಾರಿಗೆ (ಆಗ ರಾಜೀವ್ ಗಾಂಧಿ ಹತ್ಯೆಯಾಗಿದ್ದು ಕಾಂಗ್ರೆಸ್ ಪರ ಅನುಂಕಪ ಅಲೆ ಇತ್ತು.) ಶಾಸಕರಾಗಿದ್ದು ಬಿಟ್ಟರೆ ಉಳಿದವರು ಕನಿಷ್ಠ ಎರಡು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ನಂತರವೇ ಶಾಸಕರಾಗಿದ್ದಾರೆ.
ಆದರೆ ಈ ಬಾರಿ ಎರಡೂ ಸಾಧ್ಯತೆಗಳು ಆಗುವ ಲಕ್ಷಣಗಳು ಇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಡಿ.ಲಕ್ಷ್ಮೀನಾರಾಯಣ್, ಕಾಂಗ್ರೆಸ್ನಿಂದ ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಎಂ.ಟಿ.ಕೃಷ್ಣಪ್ಪ ಹೊರೆತು ಪಡಿಸಿದರೆ ಉಳಿದವರು ಹೊಸಬರೇ. ಈ ಬಾರಿ ಜೆಡಿಎಸ್ನಿಂದ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಕೆಜೆಪಿಯಿಂದ ಮಸಾಲಾ ಜಯರಾಂ, ಬಿಜೆಪಿಯಿಂದ ಕೃಷ್ಣಪ್ಪನವರ ವೈರಿ ಬಿ.ಕೆ.ಸೋಮಣ್ಣ, ಕಾಂಗ್ರೆಸ್ನಿಂದ ಇದೇ ಪ್ರಥಮಬಾರಿಗೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಲಾಗಿದ್ದು ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಗೀತಾ ರಾಜಣ್ಣನವರನ್ನು ಅಖಾಡಕ್ಕಿಳಿಸಲಾಗಿದೆ.
ಒಕ್ಕಲಿಗ ಸಮುದಾಯದವರೇ: ಈ ಎಲ್ಲರೂ ಕ್ಷೇತ್ರದ ಪ್ರಬಲ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದವರೇ. ಇನ್ನು ಎರಡನೇ ಸ್ಥಾನದಲ್ಲಿರುವ ವೀರಶೈವ ಸಮುದಾಯಕ್ಕೆ ಯಾವುದೇ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಸ್ಪರ್ಧೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ವೀರಶೈವ ಮುಖಂಡ ಎಚ್.ಮಹೇಶ್, ಹಿಂದುಳಿದವರಿಗೆ ಅವಕಾಶವೇ ಸಿಗುತ್ತಿಲ್ಲ ಎಂದು ಬಿಎಸ್ಆರ್ನಿಂದ ಅಖಾಡಕ್ಕೆ ಇಳಿದಿರುವ ಹೆಲಿಕಾಫ್ಟರ್ ರಾಜಶೇಖರ್ ಕ್ಷೇತ್ರದಲ್ಲಿ ಗುರುತಿಸಲ್ಪಡುವ ಅಭ್ಯರ್ಥಿಗಳಾಗಿದ್ದಾರೆ.
ಕೆಜೆಪಿ-ಜೆಡಿಎಸ್ ಹಣಾಹಣಿ: ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕೆಜೆಪಿ ನಡುವೆ ಜಿದ್ದಾಜಿದ್ದಿ ಕಂಡು ಬಂದಿದೆ. ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಆಡಳಿತ ಮಾಡಿರುವ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಉತ್ತಮ ಕೆಲಸಗಾರ, ಆಡಳಿತಗಾರ ಎಂಬ ಹೆಸರಿದೆ. ಕೆಲಸಗಾರ ಆದರೆ ಒರಟ ಎಂಬ ಗಾಳಿ ಕ್ಷೇತ್ರದಾದ್ಯಂತ ಹರಡಿ ಕೃಷ್ಣಪ್ಪನವರನ್ನು ಬದಲಾವಣೆ ಮಾಡುವ ಮಾತು ಕೇಳಿಬರುತ್ತಿದೆ. ವಿರೋಧಿ ಅಲೆ ಏನಾದರೂ ವಿಪರೀತವಾಗಿ ಎದ್ದರೆ ಹಾಗೂ ಕಾಂಗ್ರೆಸ್ನ ಅಭ್ಯರ್ಥಿಯ ಬಗ್ಗೆ ಅಸಮಾಧಾನಗೊಂಡಿರುವ ಮಂದಿ ಕೆಜೆಪಿಗೆ ಬೆಂಬಲಿಸಿದರೆ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಗೆಲವು ನಿಶ್ಚಿತ. ಆದರೆ ಕೆಜೆಪಿ ಅಭ್ಯರ್ಥಿ ಈಗಲೇ ರಾಜಕೀಯಕ್ಕೆ ಎಂಟ್ರಿ ನೀಡಿರುವುದು ಇನ್ನೂ ಸ್ಪಲ್ಪ ದಿನ ಕಾಯಲಿ ಎಂಬ ಭಾವನೆ ಬಂದರೆ ಫಲಿತಾಂಶದಲ್ಲಿ ಏರುಪೇರಾದರೂ ಅಚ್ಚರಿ ಇಲ್ಲ. ಕೆಜೆಪಿ ಅಭ್ಯರ್ಥಿ ಸದ್ಯ ಗೆಲವಿನ ಸನಿಹದಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಇದುವರೆಗೆ ಸ್ಪರ್ಧಿಸಿರುವ ಯಾರೂ ಸಹ ಗೆಲವಿನ ಸನಿಹ ಬಂದಿದ್ದ ಉದಾಹರಣೆಗಳು ಇಲ್ಲ.
ಅಸಮಾಧಾನದ ಹೊಗೆ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದರೂ ಸಹ ಇಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣುತ್ತಿಲ್ಲ. ಇಲ್ಲಿ ಗೀತಾ ರಾಜಣ್ಣ ನವರನ್ನು ಆಯ್ಕೆ ಮಾಡಿರುವುದು ಬಹುತೇಕ ಮುಖಂಡರಲ್ಲಿ ಅಸಮಾಧಾನ ಮನೆ ಮಾಡಿದೆ. ಕ್ಷೇತ್ರದಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿ ಟಿಕೆಟ್ಗೆ ಪ್ರಬಲ ಆಕಾಂಕ್ಷಿಗಳಿದ್ದರು. ಅವರಲ್ಲಿ ಬಹುತೇಕರು ಚುನಾವಣಾ ಪ್ರಚಾರಕ್ಕೂ ಬಾರದೇ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ನ ಗೆಲವಿನ ಕುದುರೆ ಎಂದೇ ಹೇಳಲಾಗಿದ್ದ ಚೌದ್ರಿ ರಂಗಪ್ಪನವರು ಈ ಬಾರಿ ಟಿಕೆಟ್ ಕೈ ತಪ್ಪಿದ್ದರಿಂದ ಆಘಾತಗೊಂಡು ಆರೋಗ್ಯ ಕೈ ಕೊಟ್ಟ ಪರಿಣಾಮ ಮನೆ ಸೇರಿದ್ದಾರೆ. ಇನ್ನು ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಜೆಡಿಎಸ್ ಸೇರಿದ್ದಾರೆ. ಉಳಿದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪ್ರಚಾರಕ್ಕೆ ತೆರಳುತ್ತಿದ್ದರೆ ಬಹುತೇಕ ಮುಖಂಡರು ಕಾರ್ಯಕರ್ತರು ಕೆಜೆಪಿ ಯ ಪಾಲಾಗಿದ್ದಾರೆ. ವೀರಶೈವರ ಮುಖಂಡ ಎಚ್.ಮಹೇಶ್ ಪಕ್ಷೇತರರಾಗಿ ಅಖಾಡಕ್ಕೆ ಧುಮುಕಿದ್ದಾರೆ. ಕೆಜೆಪಿಯ ವೀರಶೈವರ ಮತಗಳಿಗೂ ಲಗ್ಗೆ ಹಾಕುವ ಸಾಧ್ಯತೆ ಇದೆ. ಶಾಸಕ ಎಂ.ಟಿ.ಕೃಷ್ಣಪ್ಪನವರ ಅಳಿಯ ಡಾ.ಚೌದ್ರಿ ನಾಗೇಶ್ ಮಹೇಶ್ ಬೆಂಬಲಕ್ಕೆ ನಿಂತಿದ್ದಾರೆ. ಅದು ಎಷ್ಟರ ಮಟ್ಟಿಗೆ ಮಹೇಶ್ಗೆ ಬಂಡವಾಳವಾಗುವುದೋ ತಿಳಿಯದು. ಇನ್ನು ಬಿಜೆಪಿಯಿಂದ ಬಿ.ಕೆ.ಸೋಮಣ್ಣ ಜೆಡಿಎಸ್ನ ಸಾಕಷ್ಟು ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.
ಬಂದರೆ ಅಚ್ಚರಿಯಂತೂ ಇಲ್ಲ. ಏನೇ ಆದರೂ ಫಲಿತಾಂಶ ಮಾತ್ರ ಫೋಟೋ ಫಿನಿಷ್.