ಪ್ರಚಾರ ವಾಹನ ಡಿಕ್ಕಿ: ಸಿಇಟಿ ಕನಸು ಭಗ್ನ
ತಿಪಟೂರು: ಸಿಇಟಿ ಪರೀಕ್ಷೆ ಬರೆಯಲು ಬೈಕಿನಲ್ಲಿ ತೆರಳುತಿದ್ದ ವಿದ್ಯಾರ್ಥಿನಿಗೆ ಎದುರಿನಿಂದ ಬಂದ ಕಾಂಗ್ರೆಸ್ ಪ್ರಚಾರದ ಟಾಟಾ ಸುಮೋ ಡಿಕ್ಕಿ ಹೊಡದ ಪರಿಣಾಮ ಕಾಲುಗಳೆರಡು ತುಂಡಾಗಿರುವ ಘಟನೆ ತಿಪಟೂರು-ತುರುವೇಕೆರೆ ರಸ್ತೆಯ ಈಚನೂರು ಗೇಟ್ ಬಳಿ ನಡೆದಿದೆ. ತಾಲೂಕಿನ ಆಲದಹಳ್ಳಿ ಗ್ರಾಮದ ನಿವಾಸಿ ಗಂಧನ ಕಾಲು ಕಳೆದುಕೊಂಡ ವಿದ್ಯಾರ್ಥಿನಿ.
ಬುಧವಾರ ಸಿಇಟಿ ಪ್ರವೇಶ ಪರೀಕ್ಷೆ ಬರೆಯಲು ತಿಪಟೂರಿಗೆ ರಾಜಶೇಖರ್ ಎನ್ನುವವರ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾಂಗ್ರೆಸ್ ಪ್ರಚಾರದ ಟಾಟಾಸುಮೋ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸೇರಿದಂತೆ ವಿದ್ಯಾರ್ಥಿನಿಯ ಕಾಲುಗಳೆರಡು ತುಂಡಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ನಗರಠಾಣೆಯಲ್ಲಿ ದಾಖಲಾಗಿದೆ.